ಶಬರಿಮಲೆಗೆ ಬರುವ ಯಾತ್ರಿಗಳು ಸೆಲೆಬ್ರಿಟಿಗಳ ಫೋಟೋ, ಪೋಸ್ಟರ್ ಗಳನ್ನು ಹಿಡಿದುಕೊಂಡು ಬಂದರೆ ಅಂಥವರಿಗೆ ಸನ್ನಿಧಾನ ಪ್ರವೇಶಕ್ಕೆ ಅವಕಾಶ ನೀಡಬಾರದೆಂದು ಕೇರಳ ಹೈಕೋರ್ಟ್ ಸೋಮವಾರ(ಜ.9 ರಂದು) ತೀರ್ಪು ನೀಡಿದೆ. ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ ಜಿ ಅಜಿತ್‌ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಯಾತ್ರಾರ್ಥಿಯೊಬ್ಬರ ದೂರಿನ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನಡೆಸಿ ತಿರುವಾಂಕೂರು ದೇವಸ್ವಂ ಮಂಡಳಿಗೆ ಪ್ರತಿಯೊಬ್ಬ ಅಯ್ಯಪ್ಪನ ಭಕ್ತ ತನ್ನ ಪೂಜಾ ಆರಾಧನವನ್ನು ಪದ್ದತಿಯಂತೆ, ಸಾಂಪ್ರದಾಯಿಕ ವಿಧಿಗಳಂತೆ ಮಾಡುವುದನ್ನು ನೋಡಿಕೊಳ್ಳಬೇಕೆಂದು ನಿರ್ದಶನ ನೀಡಿದೆ.
ಈ ಹಿಂದೆ ಡ್ರಮರ್ ಶಿವಮಣಿ ಅವರು ಸೋಪಾನಂನ ಮುಂದೆ ಡ್ರಮ್ ಬಾರಿಸಿದ ವಿಚಾರವನ್ನು ಗಮನಿಸಿ,ಯಾತ್ರಿಕರು ಡ್ರಮ್ ಬಾರಿಸಲು ಸೋಪಾನಂ ಅಧಿಕಾರಿ ಅನುಮತಿ ನೀಡಬಾರದು ಎಂದು ಕೋರ್ಟ್ ಹೇಳಿದೆ.
ಯಾವ ಭಕ್ತರೂ ಕೂಡ ಸಿನಿಮಾ ತಾರೆಯರ ಫೋಟೋ, ರಾಜಕಾರಣಿಗಳ ಫೋಟೋ, ಬ್ಯಾನರ್ ಯಾವುದನ್ನು ದೇವರ ದರ್ಶನ ಪಡೆಯುವ ವೇಳೆ ತರುವಾಗಿಲ್ಲ ಎಂದು ಕೋರ್ಟ್ ಹೇಳಿದೆ.
ಘಟನೆಗೆ ಸಂಬಂಧಿಸಿದಂತೆ ಸೋಪಾನಂ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮಂಡಳಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೋರ್ಟ್ ಹೇಳಿದೆ.