ಪಣಜಿ: ಬಾಂಬ್ ಬೆದರಿಕೆಯಿಂದಾಗಿ ಗೋವಾದ ದಾಬೋಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ರಷ್ಯಾದ ವಿಮಾನಯಾನ ಸಂಸ್ಥೆ ಅಜುರ್ ಏರ್‌ನ ವಿಮಾನದಲ್ಲಿ ಸ್ಫೋಟಕ ಬಾಂಬ್ ಇದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಅದೇ ಸಮಯದಲ್ಲಿ ಗೋವಾ ಏರ್ ಟ್ರಾಫಿಕ್ ಕಂಟ್ರೋಲ್ ಅದೇ ವಿಷಯವನ್ನು ಹೊಂದಿರುವ ಮೇಲ್ ಸ್ವೀಕರಿಸಿದೆ. ಇದಾದ ನಂತರ ಹೈ ಅಲರ್ಟ್ ಘೋಷಿಸಲಾಗಿದ್ದು, ವಿಮಾನದ ಪೈಲಟ್‌ಗೆ ಮಾಹಿತಿ ನೀಡಲಾಗಿದೆ.
ಗೋವಾದ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ ಈ ವಿಮಾನವನ್ನು ತಕ್ಷಣವೇ ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಅಷ್ಟರಲ್ಲಾಗಲೇ ಜಾಮ್‌ನಗರದ ಎಲ್ಲಾ ಉನ್ನತ ಅಧಿಕಾರಿಗಳು ವಿಮಾನ ನಿಲ್ದಾಣವನ್ನು ತಲುಪಿದ್ದರು.
ವಿಮಾನದಲ್ಲಿ ಹಲವು ವಿದೇಶಿ ಪ್ರಯಾಣಿಕರಿದ್ದರು. ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಕೂಡ ಸಂಪೂರ್ಣ ಘಟನೆಯನ್ನು ದೃಢಪಡಿಸಿದ್ದಾರೆ. ಜಾಮ್‌ನಗರದ ಆಡಳಿತ ಅಧಿಕಾರಿಗಳು, ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಮಾನವನ್ನು ತಪಾಸಣೆ ನಡೆಸುತ್ತಿದ್ದಾರೆ. ಪ್ರಸ್ತುತ, ಜಾಮ್‌ನಗರ ವಿಮಾನ ನಿಲ್ದಾಣದೊಳಗೆ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ಘಟನೆಯಿಂದಾಗಿ ಗೋವಾ ಪೊಲೀಸರೂ ಅಲರ್ಟ್ ಆಗಿದ್ದು, ದಾಬೋಲಿ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈಗ ನಿಖರವಾಗಿ ಬಾಂಬ್ ಇ-ಮೇಲ್ ಎಲ್ಲಿಂದ ಬಂತು? ಯಾರು ಮಾಡಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ತಡರಾತ್ರಿ ಪೊಲೀಸರ ಉನ್ನತ ಸಭೆ ನಡೆದಿದೆ. ಬಾಂಬ್ ಇರುವ ಬಗ್ಗೆ ಮಾಹಿತಿ ಬಂದ ತಕ್ಷಣ ಬಾಂಬ್ ಪತ್ತೆ ದಳ ಹಾಗೂ ಅಗ್ನಿಶಾಮಕ ದಳ ದಾಬೋಲಿ ವಿಮಾನ ನಿಲ್ದಾಣಕ್ಕೆ ತಲುಪಿತು. ಇದಲ್ಲದೆ, ಸಿಐಎಫ್ ಅಧಿಕಾರಿಗಳು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ಉಪಸ್ಥಿತರಿದ್ದರು.