ಕುಮಟಾ : ಬಸ್‌ನಲ್ಲಿ ಆಗಮಿಸುತ್ತಿದ್ದ ಯುವಕನೋರ್ವ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳ ಫೋಟೋ ತೆಗೆದು ಪ್ರಯಾಣಿಕರಿಂದ ಧರ್ಮದೇಟು ತಿಂದ ಘಟನೆ ಕುಮಟಾದ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಾಗಲಕೋಟೆ
ಮೂಲದ ಯುವಕ ಬಾಗಲಕೋಟೆಯಿಂದ ಉಡುಪಿಗೆ ಆಗಮಿಸುತ್ತಿದ್ದ ಬಸ್‌ನಲ್ಲಿ ಕುಮಟಾಕ್ಕೆ ಪ್ರಯಾಣಿಸುತ್ತಿದ್ದ. ಇದೇ ಬಸ್‌ಗೆ ಶಿರಸಿಯಿಂದ ಕುಮಟಾಕ್ಕೆ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಹತ್ತಿದ್ದಳು. ಬಸ್ ಹೊರಡುತ್ತಿದ್ದಂತೆ ವಿದ್ಯಾರ್ಥಿನಿ ನಿದ್ದೆಗೆ ಜಾರಿದ್ದು ಈ ವೇಳೆ ಹುಡುಗ ತನ್ನ ಮೊಬೈಲ್‌ನಲ್ಲಿ ಹುಡುಗಿಯ ಫೋಟೋ ತೆಗೆದಿದ್ದ ಎನ್ನಲಾಗಿದೆ.
ಸಹ ಪ್ರಯಾಣಿಕನೋರ್ವ ಗಮನಿಸಿ ಯುವತಿ ಗಮನಕ್ಕೆ ತಂದಿದ್ದ. ಈ ವೇಳೆ ಯುವತಿ ಹುಡುಗನನ್ನು ಪ್ರಶ್ನಿಸಿದಾಗ ಆತ ಫೋಟೋ ತೆಗೆದಿಲ್ಲ ಎಂದು ಹೇಳಿಕೊಂಡಿದ್ದು, ಮೊಬೈಲ್ ತೋರಿಸುವಂತೆ ಕೇಳಿದರೂ ನಿರಾಕರಿಸಿದ್ದ. ಈ ಸಂಬಂಧ ಪ್ರಯಾಣಿಕರು ಮತ್ತು ಯುವಕನ ನಡುವೆ ಬಸ್‌ನಲ್ಲಿ ಮಾತಿನ ಚಕಮಕಿ ನಡೆದಿದೆ.ಬಳಿಕ ಬಸ್ಸು ಕುಮಟಾದ ಹೊಸ ಬಸ್ ನಿಲ್ದಾಣಕ್ಕೆ ಬಂದ ಮೇಲೆ ಪ್ರಯಾಣಿಕರೆಲ್ಲ ಜಮಾವಣೆಗೊಂಡಿದ್ದರು. ಯುವಕ ವಿದ್ಯಾರ್ಥಿನಿಯ ಫೋಟೋ ತೆಗೆದಿರುವ ವಿಚಾರ ತಿಳಿಯುತ್ತಿದ್ದಂತೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಈ ವೇಳೆ ಬಸ್ ನಿಲ್ದಾಣದ ಕಂಟ್ರೋಲರ್ ಕುಮಟಾ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿ ಯುವಕ ಬಾಗಲಕೋಟೆಯಿಂದ ಕುಮಟಾದಲ್ಲಿರುವ ತಮ್ಮಸಂಬಂಧಿಕರ ಮನೆಗೆ ಬರುವಾಗ ಈ ಎಡವಟ್ಟು ಮಾಡಿಕೊಂಡಿದ್ದಾನೆ. ಈ ಬಗ್ಗೆ ಕುಮಟಾ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.