ಕುಮಟಾ : ತಾಲೂಕಿನ ಹೀರೆಗುತ್ತಿ ವಲಯ ಅರಣ್ಯ ವ್ಯಾಪ್ತಿಯ ಬೆಟ್ಕುಳಿ ಬಳಿ ಅಪರಿಚಿತ ವಾಹನ ಬಡಿದು ಚಿರತೆಯೊಂದು ಮೃತಪಟ್ಟ ಘಟನೆ ನಡೆದಿದೆ. ಶುಕ್ರವಾರ ಬೆಳಿಗ್ಗಿನ ಜಾವ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಚಿರತೆಯ ಮೃತ ದೇಹ ಕಂಡು ಬಂದಿದ್ದು ಅದನ್ನು ನೋಡಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗುರುವಾರ ಮಧ್ಯರಾತ್ರಿ ಅಥವಾ ಶುಕ್ರವಾರ ಬೆಳಿಗ್ಗಿನ ಜಾವ ಕಾಡಂಚಿನಿಂದ ರಾಷ್ಟ್ರೀಯ ಹೆದ್ದಾರಿ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಚಿರತೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಚಿರತೆಯ ಹೊಟ್ಟೆಯ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿರುವುದು ಕಂಡುಬಂದಿದ್ದು ಪರೀಕ್ಷೆಗಾಗಿ ಕುಮಟಾ ಪಶು ವೈದ್ಯಕೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ವಾಹನ ಸವಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಪರಿಶೀಲನೆ ನಡೆಸಿ ಕಳೇಬರವನ್ನು ಮರಣೋತ್ತರ ಪರೀಕ್ಷೆಗಾಗಿ ಕುಮಟಾಕ್ಕೆ ಕಳುಹಿಸಿದ್ದಾರೆ.