ಶಿರಸಿ: ಮಾತೃ ಪೂರ್ಣ ಯೋಜನೆ ಅಕ್ಟೋಬರ್ 2 ರಂದು ಉಧ್ಘಾಟನೆಗೊಂಡಿದ್ದು, ಗರ್ಬಿಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ಒದಗಿಸುವ ಯೋಜನೆ ಅತ್ಯುತ್ತಮವಾದ ಯೋಜನೆಯಾಗಿದೆ. ಆದರೆ ಬಾಣಂತಿಯರು ಮತ್ತು ಗರ್ಬಿಣಿ ಮಹಿಳೆಯರು ಅಂಗನವಾಡಿಗೆ ಹೋಗಿ ಊಟ ಮಾಡಿ ಬರಬೇಕೆಂಬುದು ವ್ಯಾವಹಾರಿಕವಾಗಿ ಅಸಾಧ್ಯವಾದ ಸಂಗತಿಯಾಗಿದೆ. ಗರ್ಬಿಣಿಯರು ಮತ್ತು ಬಾಣಂತಿಯರು ಸೂಕ್ಷ್ಮ ವ್ಯವಸ್ಥೆಯಲ್ಲಿ ಇರಬೇಕಾದ ಸಂದರ್ಭದಲ್ಲಿ ಅವರನ್ನು ಅನಾವಶ್ಯಕವಾಗಿ ತಿರುಗಾಡಿಸುವುದರಿಂದ ಶಾರೀರಿಕವಾಗಿ ಆಯಾಸಗೊಳ್ಳುವುದರ ಜೊತೆಗೆ ವಾತಾವರಣದ ದುಷ್ಪರಿಣಾಮ ತಗಲುವ ಸಂಭವಗಳು ಹೆಚ್ಚಾಗಿರುತ್ತದೆ. ಇದರಿಂದಾಗಿ ಅವರ ಆರೋಗ್ಯದ ಜೊತೆಗೆ ಮಗುವಿನ ಮೇಲೂ ದುಷ್ಪರಿಣಾಮಗಳಾಗುವ ಸಂಭವವಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮಲೆನಾಡಿನ, ಕರಾವಳಿ ಜಿಲ್ಲೆಗಳಲ್ಲಿ ಅಂಗನವಾಡಿಗಳು ದೂರ ದೂರದಲ್ಲಿ ಇರುವುದರಿಂದ ಹಾಗೂ ಅಂಗನವಾಡಿಗಳಲ್ಲಿ ಅಡುಗೆ ಮಾಡಿ ಊಟ ನೀಡುವ ಸೌಲಭ್ಯಗಳ ಕೊರತೆಗಳಿರುವುದರಿಂದ (ಬಾಡಿಗೆ ಕಟ್ಟಡಗಳು ಹೆಚ್ಚಾಗಿರುವುದರಿಂದ) ಗರ್ಬಿಣಿಯರು ಮತ್ತು ಬಾಣಂತಿ ಮಹಿಳೆಯರಿಗೆ ಈ ಯೋಜನೆಯು ಅನಾನುಕೂಲವಾಗುತ್ತದೆ. ಮಲೆನಾಡಿನ ಕರಾವಳಿ ಜಿಲ್ಲೆಗಳಲ್ಲಿ ಈ ಮೊದಲಿನಂತೆ ಗರ್ಬಿಣಿಯರು ಮತ್ತು ಬಾಣಂತಿ ಮಹಿಳೆಯರಿಗೆ ನೀಡುವ ಪೌಷ್ಠಿಕ ಆಹಾರವನ್ನು ಅವರ ಮನೆಗೆ ತಲುಪಿಸುವುದು ಸೂಕ್ತವಾಗಿದೆ. ಇದರಿಂದಾಗಿ ಯೋಜನೆಯ ಸಂಪೂರ್ಣ ಲಾಭ ಫಲಾನುಭವಿಗಳಿಗೆ ಲಭಿಸಿದಂತಾಗುತ್ತದೆ. ಆದ್ದರಿಂದ ಉತ್ತರಕನ್ನಡ ಜಿಲ್ಲೆ ಮತ್ತು ಮಲೆನಾಡಿನ ಕರಾವಳಿ ಜಿಲ್ಲೆಗಳ ಗರ್ಬಿಣಿಯರು ಮತ್ತು ಬಾಣಂತಿ ಮಹಿಳೆಯರಿಗೆ ನೀಡುವ ಪೌಷ್ಠಿಕ ಆಹಾರವನ್ನು ಅವರ ಮನೆಗಳಿಗೆ ತಲುಪಿಸುವ ಅಗತ್ಯ ಕ್ರಮ ಕೈಗೊಳ್ಳಲು ಅಗ್ರಹಿಸಿದ್ದಾರೆ.