ಸಿದ್ದಾಪುರ: ಒಬ್ಬರನ್ನೊಬ್ಬರು ಹಿಂಸಿಸಿ ಬದುಕದಂತೆ ಶಾಂತಿ ಸುವ್ಯವಸ್ಥೆ ಕಲ್ಪಿಸಲು ಆಡಳಿತ ನಡೆಸುವ ಸರಕಾರ ಬೇಕು. ನಾವು ನಾವಾಗಿ ಉಳಿಯಲು ಮಠ ಬೇಕು. ಆಡಳಿತ ನಡೆಸುವ ಸರಕಾರ ಮತ್ತು ಮಠವೆಂಬ ಧರ್ಮಸರಕಾರ ಸರಿಯಾಗಿದ್ದಲ್ಲಿ ಬದುಕು ಸುಲಭ ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರ ಭಾರತೀ ಶ್ರೀ ಹೇಳಿದರು. ಇಲ್ಲಿಯ ಭಾನ್ಕುಳಿಯ ಶ್ರೀರಾಮದೇವಮಠದ ಗೋಸ್ವರ್ಗದಲ್ಲಿ ನಡೆಯುತ್ತಿರುವ ಗೋದಿನ- ಗೋವಿಗಾಗಿ ಆಲೆಮನೆ ಕಾರ್ಯಕ್ರಮ, ಶ್ರೀ ಅಖಿಲ ಹವ್ಯಕ ಮಹಾಸಭಾದ ಪ್ರತಿಬಿಂಬ ಮತ್ತು ಪ್ರೋತ್ಸಾಹ ಧನ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ನಾವು ನಮ್ಮ ಸಂಸ್ಕೃತಿ ಪರಂಪರೆಯನ್ನು ಮರೆಯುತ್ತಿದ್ದೇವೆ. ದೇಶಿ ಕೋಣದ ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂದರೆ ನಂಬುವ ಸ್ಥಿತಿ ತಲುಪಿದ್ದೇವೆ. ಯಂತ್ರದ ಕೈಗೊಂಬೆಯಾಗಿ ಬದುಕುತ್ತಿದ್ದೇವೆ. ನಮ್ಮತನ, ನಮ್ಮ ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

RELATED ARTICLES  ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ : ಕಾರವಾರದಲ್ಲಿ ಕ.ರ.ವೇ ಪ್ರತಿಭಟನೆ


ಆಧ್ಯಾತ್ಮದ ತಳಹದಿಯಿಲ್ಲದ ನಾಯಕ ಶಾಶ್ವತ ಕಾರ್ಯ ಮಾಡಲಾರ. ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರ ಆಧ್ಯಾತ್ಮದ ಹಿನ್ನೆಲೆಯಲ್ಲಿಯೇ ರಾಜ್ಯಭಾರ ಮಾಡಿ ಎಲ್ಲರ ಸಂಕಷ್ಟಗಳನ್ನೂ ದೂರಮಾಡಿ ’ರಾಮರಾಜ್ಯ’ವೆಂಬ ಹೆಸರು ಚಿರಸ್ಥಾಯಿಯಾಗುವಂತೆ ಮಾಡಿದ. ಇಂದು ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ನಾಳೆ ಸನ್ಮಾನ ಕಾರ್ಯವಿದೆ. ಕಾಗೇರಿಯವರು ರಾಜಕಾರಣಿಯಾಗಿ, ಶಾಸಕನಾಗಿ ಯೋಗ,ಧ್ಯಾನ ಪರಂಪರೆ ಅಳವಡಿಸಿಕೊಂಡಿದ್ದಾರೆ. ಸಮಾಜದ ಉನ್ನತಿಗೆ ಇಂತಹ ವ್ಯಕ್ತಿತ್ವದವರು ಬೇಕು. ಇವರು ಆಡಳಿತ ನಡೆಸುವ ರಾಜನಂತಾದರೆ ಸಾಲದು, ರಾಜರ್ಷಿಯಾಗಬೇಕು ಎಂದು ಹೇಳಿದ ಶ್ರೀಗಳು ಅವರು ಸನ್ಮಾನದಿಂದ ಉತ್ತೇಜಿತರಾಗಿ ಮತ್ತಷ್ಟು ಸಮಾಜಮುಖಿಯಾದ ಕಾರ್ಯ ಸಾಧಿಸುವಂತಾಗಲಿ ಎಂದು ಹಾರೈಸಿದರು.


ಪ್ರತಿಬಿಂಬವನ್ನು ಹಾಗೂ ಗೋಸ್ವರ್ಗದ ಇ-ಹುಂಡಿಯನ್ನು ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಾಡಿನಲ್ಲಿ ಒಂದೇ ತೆರನಾದ ಹತ್ತಾರು ಕಾರ್ಯಕ್ರಮಗಳನ್ನು ಕಾಣುತ್ತೇವೆ. ಆದರೆ ಗೋಸ್ವರ್ಗದಲ್ಲಿ ನಡೆಯುವ ಕಾರ್ಯಕ್ರಮಗಳು ವಿಶಿಷ್ಟ ಪರಿಕಲ್ಪನೆಯಲ್ಲಿ ವಿನೂತನವಾಗಿದ್ದರೂ ನಮ್ಮ ಮೂಲ ಸಂಸ್ಕೃತಿ-ಸಂಸ್ಕಾರವನ್ನು ಪ್ರತಿಬಿಂಬಿಸುತ್ತವೆ. ವಿಷ್ಣುಗುಪ್ತ ವಿಶ್ವವಿದ್ಯಾಲಯವನ್ನು ಹುಟ್ಟು ಹಾಕಿರುವ ಶ್ರೀರಾಘವೇಶ್ವರಭಾರತೀ ಶ್ರೀಗಳು ತಾವು ಹೋದೆಡೆಯಲ್ಲೆಲ್ಲಾ ಹೊಸತನ, ಹೊಸಸೃಷ್ಟಿ ಮಾಡುವ ಮೂಲಕ ನಮ್ಮತನದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾಪ್ರೋತ್ಸಾಹ ನಿಧಿ ವಿತರಣೆ ಹಾಗೂ ಪ್ರತಿಬಿಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಹವ್ಯಕಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಪಿ.ಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಕೃಷ್ಣಮೂರ್ತಿ ಭಟ್ಟ, ಪ್ರಶಾಂತ ಭಟ್ಟ, ಸಂದೇಶ ತಲಕಾಲಕೊಪ್ಪ, ಜಿ.ಎಸ್.ಹೆಗಡೆ, ರಾಜಲಕ್ಷ್ಮಿ ದೇವಪ್ಪ, ಜಿ.ಜಿ.ಹೆಗಡೆ ಬಾಳಗೋಡ ಇತರರು ಪಾಲ್ಗೊಂಡಿದ್ದರು. ಸತೀಶ ಹೆಗಡೆ ಆಲ್ಮನೆ ದಂಪತಿ ಸಭಾಪೂಜೆ ನೆರವೇರಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು. 

RELATED ARTICLES  ಕಾರವಾರ ಚೆಕ್ ಪೋಸ್ಟ್ ದಾಟಿ ಗೋವಾಕ್ಕೆ ಹೋದವನಲ್ಲಿಯೂ ಕೋರೋನಾ ಪಾಸಿಟೀವ್..! ಮೂಲದ ಪತ್ತೆ ಕಾರ್ಯ ಶುರು