ಭಟ್ಕಳ: ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಅಪಾಯದ ಸ್ಥಿತಿಗೆ ತಲುಪುವುದನ್ನು ಮನಗಂಡ ಲೈಫ್ ಗಾರ್ಡ್ ಅವರಿಗೆ ಎಚ್ಚರಿಕೆಯನ್ನು ನೀಡಲು ಹೋದಾಗ ಲೈಫ್ ಗಾರ್ಡ್ ಮೇಲೆಯೇ ಹಲ್ಲೆ ಮಾಡಿರುವ ಘಟನೆ
ರವಿವಾರ ನಡೆದಿದೆ. ದ್ವಿತೀಯ ಶನಿವಾರ ಹಾಗೂ ಭಾನುವಾರ ಮುರ್ಡೇಶ್ವರದಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರಿದ್ದು ಸಮುದ್ರ ಸ್ನಾನಕ್ಕೆ, ನೀರಿನಲ್ಲಿ ಆಟವಾಡಲು ಇಳಿಯುತ್ತಿದ್ದ ಪ್ರವಾಸಿಗರ ಕುರಿತು ಸದಾ ಕಾಳಜಿ ವಹಿಸುತ್ತಿರುವ ಲೈಫ್ ಗಾರ್ಡ್ ನೀರಿನಲ್ಲಿ ಅಪಾಯದ ಅಂಚಿಗೆ ಹೋಗುತ್ತಿರುವವರನ್ನು ಎಚ್ಚರಿಸುವುದು ಸಾಮಾನ್ಯ. ಅದೇ ರೀತಿಯಾಗಿ ಪ್ರವಾಸಿಗರಿಗೆ ಎಚ್ಚರಿಕೆಯನ್ನು ನೀಡುವ ಸಂದರ್ಭದಲ್ಲಿ ನಾಲ್ವರು ಪಾನಮತ್ತರಾದ ಪ್ರವಾಸಿಗರು ಲೈಫ್‌ಗಾರ್ಡ್ ಪ್ರವೀಣ ಎನ್ನುವವರ ಮೇಲೆ ಹಲ್ಲೆ ಮಾಡಿದ್ದು ಅವರ ಮೂಗಿನ ಸಮೀಪ ರಕ್ತಸಿಕ್ತ ಗಾಯಗೊಳಿಸಿದ್ದಾರೆ.
ತಕ್ಷಣ ಅಕ್ಕಪಕ್ಕದಲ್ಲಿದ್ದವರು ಪ್ರವಾಸಿಗರನ್ನು ಸಮಾಧಾನ
ಪಡಿಸಿದ್ದರಿಂದ ಅನಾಹುತ ತಪ್ಪಿದೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ದೂರು ದಾಖಲಾಗಿರುವುದಿಲ್ಲ. ಭಾನುವಾರ ಬೆಳಿಗ್ಗೆಯಷ್ಟೇ ರಕ್ಷಿಸಿದ್ದ ಇಬ್ಬರನ್ನು ಲೈಫ್‌ಗಾರ್ಡ್‌ಗಳು ಮಧ್ಯಾಹ್ನದ ಸಮಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಾದೇವ ಮಲ್ಲಪ್ಪ ತಂಬಡ ಎನ್ನುವವರನ್ನು ರಕ್ಷಿಸಿದ್ದರು. ಶನಿವಾರ ಕೂಡಾ ಕೋಲಾರದ ಆದೇಶ ರವೀಂದ್ರ (19) ಎನ್ನುವನನ್ನು ರಕ್ಷಣೆ ಮಾಡಲಾಗಿದ್ದರೂ ಕೂಡಾ ತಮ್ಮ ಆಟಕ್ಕೆ ಅಡ್ಡಿ ಬಂದರೆನ್ನುವ ಕಾರಣಕ್ಕೆ ಲೈಫ್‌ಗಾರ್ಡ್ ಮೇಲೆಯೇ ಹಲ್ಲೆ ಮಾಡಿರುವುದನ್ನು ನಾಗರಿಕರು ಖಂಡಿಸಿದ್ದಾರೆ.