ಬೆಂಗಳೂರು : ರಾಜ್ಯದಲ್ಲಿ ಕೆಲ ದಿನಗಳಿಂದ ಹೆಚ್ಚು ಚಳಿಯ ವಾತಾವರಣವಿದ್ದು, ಮುಂದಿನ ಒಂದು ವಾರ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಚಳಿ ಜೊತೆಗೆ ಶೀತಗಾಳಿಯ ಎಚ್ಚರಿಕೆ ಸಹ ನೀಡಲಾಗಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮತ್ತಷ್ಟು ಚಳಿ ಹೆಚ್ಚಾಗುವ ಸಾಧ್ಯತೆ ಇದೆ.
ಸೋಮವಾರದಿಂದ 7 ದಿನಗಳ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಂಜು ಕವಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಜ.16ರಿಂದ 20ರವರೆಗೆ ಕನಿಷ್ಠ ತಾಪಮಾನ 13 ರಿಂದ 14 ಡಿಗ್ರಿ ಸೆಲ್ಸಿಯಸ್ಸ್ ಮತ್ತು ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮುಂತಾದೆಡೆ ಶೀತ ಗಾಳಿ ಹೆಚ್ಚಾಗಲಿದೆ. ಹಾಗೇ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಳಿ ಹೆಚ್ಚಾಗುತ್ತಲೇ ಇದೆ. ಈ ಭಾಗದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 9ರಿಂದ 13 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.
ಇದರ ಪರಿಣಾಮವಾಗಿ ರಾಜ್ಯದ ಕೆಲವು ಭಾಗಗಳಲ್ಲಿ, ಶೀತ ಅಲೆಗಳ ಪರಿಸ್ಥಿತಿ ಇರುತ್ತದೆ. ಬಾಗಲಕೋಟೆ, ಬೀದರ್, ವಿಜಯಪುರದಲ್ಲಿ ಭಾರೀ ಚಳಿ ಶುರುವಾಗಿದೆ. ಪ್ರಮುಖವಾಗಿ ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಗಾಳಿಯ ಮುನ್ಸೂಚನೆ ನೀಡಲಾಗಿದೆ.