ಶಿವಮೊಗ್ಗ: ಇಲ್ಲಿನ ಗೋಂದಿಚಟ್ನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು ಎಂಬತ್ತು ವಿದ್ಯಾರ್ಥಿಗಳು ನಿನ್ನೆ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಅಸ್ವಸ್ಥಗೊಳ್ಳಲು ಆಹಾರ ಕಾರಣವೇ ಅಥವಾ ನೀರು ಕಾರಣವೇ ಎನ್ನುವುದು ಸ್ಪಷ್ಟವಾಗಿಲ್ಲ. ಮೆಗ್ಗಾನ್ ಆಸ್ಪತ್ರೆಯ ಐದಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದ್ದಾರೆ. ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ಮಕ್ಕಳ ಪೋಷಕರು, ಅಧಿಕಾರಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಆಗಮಿಸಿದ್ದಾರೆ. ಮಧ್ಯಾಹ್ನದ ಚಪಾತಿ, ಅನ್ನಸಾಂಬಾರು ಸೇವಿಸಿದ ಬಳಿಕ ಮಕ್ಕಳಲ್ಲಿ ವಾಂತಿ ಬೇಧಿ ಆರಂಭವಾಗಿದೆ. ಮಧ್ಯಾಹ್ನ ಊಟ ಮಾಡಿದ ಬಳಿಕ ಸಂಜೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವಿದ್ಯಾರ್ಥಿನಿಯೊಬ್ಬಳು ಮಾಹಿತಿ ನೀಡಿದ್ದಾಳೆ. ಬಹುತೇಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟ ಸೇವಿಸಿದ ತಕ್ಷಣ ವಾಂತಿ ಬೇಧಿ ಕಾಣಿಸಿಕೊಂಡಿತ್ತು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ್ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. “ಆಹಾರ, ವಾಂತಿ ಸ್ಯಾಂಪಲ್ ಪಡೆದಿದ್ದು, ಘಟನೆಗೆ ನಿಖರ ಕಾರಣ ತಿಳಿದುಬರಲಿದೆ. ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲʼʼ ಎಂದು ಅಶೋಕ್ ನಾಯ್ಕ್ ಹೇಳಿದ್ದಾರೆ.
2017ರಲ್ಲಿಯೂ ಶಿವಮೊಗ್ಗದ ಗಾಜನೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾತ್ರಿಯೂಟ ಸೇವಿಸಿದ ಬಳಿಕ ಅಸ್ವಸ್ಥಗೊಂಡಿದ್ದರು.
ಹಲವು ಕಡೆಗಳಲ್ಲಿ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳುವ ಘಟನೆಗಳು ಆಗಾಗ ನಡೆಯುತ್ತಿದೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯಿಂದ ಆಹಾರ ಸಿದ್ಧತೆ ನಡೆಸಲು ರಾಜ್ಯದ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದಾರೆ. ಶಾಲೆಗಳಿಗೆ ಪೂರೈಸುವ ಆಹಾರದ ಗುಣಮಟ್ಟದ ಕುರಿತೂ ಪರಿಶೀಲನೆ ನಡೆಸಲಾಗುತ್ತಿದೆ. ಹೀಗಿದ್ದರೂ, ಬಿಸಿಯೂಟಕ್ಕೆ ಹಲ್ಲಿ ಅಥವಾ ಇತರೆ ಜಂತುಗಳು ಬಿದ್ದು ಮಕ್ಕಳು ಅಸ್ವಸ್ಥಗೊಳ್ಳುವಂತಹ ಘಟನೆಗಳೂ ಆಗಾಗ ವರದಿಯಾಗುತ್ತಿದೆ.