ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಅಂಗಸಂಸ್ಥೆಗಳ ಜಂಟಿ ವಾರ್ಷಿಕ ಸ್ನೇಹ ಸಮ್ಮೇಳನ ಸರಸ್ವತಿ ಸಂಭ್ರಮ ೨೦೨೩ ಸಡಗರದಿಂದ ನಡೆಯಿತು.
ಕುಮಟಾದ ದಂಡಾಧಿಕಾರಿಗಳಾದ ಶ್ರೀ ವಿವೇಕ ಶೆಣ್ವಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ತಂದೆ-ತಾಯಿಯವರನ್ನು ಗೌರವ ಪ್ರೀತಿಯಿಂದ ನೋಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಮೊಬೈಲ್‌ನ್ನು ಧನಾತ್ಮಕ ಕೆಲಸಗಳಿಗಾಗಿ ಮಾತ್ರ ಉಪಯೋಗಿಸಿ, ಉಳಿದ ಸಮಯ ಅದರಿಂದ ದೂರವಿದ್ದು ಸಾಧನೆಯ ಮಾರ್ಗವನ್ನು ಸರಿಯಾಗಿ ಆಯ್ಕೆ ಮಾಡಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ತದನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ವಿನಾಯಕ ಎಂ. ಭಂಡಾರಿ ಮಾತನಾಡಿ, ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲೆಯ ಹಾಗೂ ಮಾಧ್ಯಮದ ಆಯ್ಕೆ ಮಾಡಬೇಕು. ಇಲ್ಲದಿದ್ದರೆ, ಖಿನ್ನತೆಗೆ ಒಳಪಟ್ಟು ಕಮರುವ ಸಾದ್ಯತೆ ಇದೆ. ದೊಡ್ಡ ದೊಡ್ಡ ಪ್ರತಿಷ್ಠಿತ ಶಾಲೆಗೆ ಸೇರಿದ ಮಾತ್ರಕ್ಕೆ ಮಗು ಬುದ್ಧಿವಂತ ಆಗಲಾರದು. ಮಗುವಿನಲ್ಲಿರುವ ಪ್ರತಿಭೆ ಗುರುತಿಸಿ, ಅದಕ್ಕೆ ಸರಿಯಾದ ಮಾರ್ಗದರ್ಶನ ನೀಡಿ, ಅದನ್ನು ಬೆಳಗುವಂತೆ ಮಾಡಿದಾಗಲೇ ನಿಜವಾದ ಅರ್ಥ ಬರಲಿದೆ. ಆ ನಿಟ್ಟಿನಲ್ಲಿ ಕೊಂಕಣ ಸಂಸ್ಥೆಯ ಕಾರ್ಯ ಪ್ರಶಂಸನೀಯ. ಈ ಶಾಲೆಯ ವಿದ್ಯಾರ್ಥಿಗಳ ಸಾಧನೆ ನೋಡಿಯೇ ಕೊಂಕಣ ಸಂಸ್ಥೆ ಎಷ್ಟೊಂದು ಬಲಾಢ್ಯವಾಗಿ ಬೆಳೆದು ನಿಂತಿದೆ ಎಂಬುದನ್ನು ಯಾರಿಂದಲಾದರೂ ಊಹಿಸಲು ಸಾಧ್ಯ ಎಂದು ಶ್ಲಾಘಿಸಿ, ಸಂಸ್ಥೆಯ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.
ರಾಜ್ಯಮಟ್ಟದಲ್ಲಿ ಶೈಕ್ಷಣಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕೊಂಕಣದ ಬಾಲಮಂದಿರದ ಶಿಕ್ಷಕಿ ಜಯಾ ಶಾನಭಾಗ ಹಾಗೂ ಅಂತರಾಷ್ಟಿçÃಯ ಮಟ್ಟದ ಖ್ಯಾತಿಯ ವೇಟ್‌ಲಿಫ್ಟರ್ ಶ್ರೀ ವೆಂಕಟೇಶ ಪ್ರಭು ಇವರ ಸಾಧನೆಯನ್ನು ಗುರುತಿಸಿ ಪುರಸ್ಕರಿಸಲಾಯಿತು. ತದನಂತರ ಪ್ರಾಥಮಿಕ ವಿಭಾಗದ ಶಿಕ್ಷಕರಾದ ಗಣೇಶ ಜೋಶಿ ಬರೆದ ‘ಅವಲೋಕನ’ ಪುಸ್ತಕವನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ಮುರಲೀಧರ ಪ್ರಭು ಲೋಕಾರ್ಪಣೆ ಮಾಡಿ ಮಾತನಾಡಿ, ಶಿಕ್ಷಕರಿಗೆ ಅಧ್ಯಯನ ಹಾಗೂ ಅಧ್ಯಾಪನ ಅತಿ ಮುಖ್ಯ. ಯಾರೇ ನಮ್ಮ ಶಿಕ್ಷಕರು ಆ ನಿಟ್ಟಿನಲ್ಲಿ ಸಾಧನೆ ಮಾಡಿದರೆ ಅದನ್ನು ಸಂಸ್ಥೆ ಗೌರವಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಠ್ಠಲ ನಾಯಕ ಮಾತನಾಡಿ, ವಾರ್ಷಿಕೋತ್ಸವ ಸಂಸ್ಥೆಯ ಪಾಲಿಗೆ ಬಹಳ ಮುಖ್ಯವಾದದ್ದು. ಪ್ರತಿವರ್ಷದ ಸಾಧನೆಯನ್ನು ಸಂಸ್ಥೆ ಸಿಂಹಾವಲೋಕನ ಮಾಡಿಕೊಳ್ಳಲು ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ವರ್ಷದಿಂದ ವರ್ಷಕ್ಕೆ ಸಂಸ್ಥೆಯ ಸಾಧನೆ ಹೆಚ್ಚುತ್ತಲಿದ್ದು ಈ ಸಾಧನೆಯ ಹಿಂದೆ ಅನೇಕ ಜನರ ನಿರಂತರ ಪರಿಶ್ರಮವಿದೆ. ನಮ್ಮ ಸಂಸ್ಥೆಯಲ್ಲಿ ಅನೇಕಮಂದಿ ಪ್ರತಿಭಾವಂತ ಶಿಕ್ಷಕರಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಶಿಕ್ಷಣದೊಂದಿಗೆ ಸಂಗೀತ ಸಾಹಿತ್ಯ ಕಲಾ ಪ್ರಕಾರಗಳಲ್ಲೂ ನಮ್ಮ ಸಂಸ್ಥೆಯ ಶಿಕ್ಷಕರು ಸಾಧನೆ ಮಾಡುತ್ತಿದ್ದಾರೆ. ಸರ್ವರಿಗೂ ಒಳ್ಳೆಯದಾಗಲಿ ಎಂದರು.
ಮುರಲೀಧರ ಪ್ರಭು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿಶ್ವಸ್ಥರುಗಳಾದ ರಮೇಶ ಪ್ರಭು ಸ್ವಾಗತಿಸಿದರು, ಡಿ.ಡಿ.ಕಾಮತ ಧನ್ಯವಾದ ಸಮರ್ಪಿಸಿದರು, ಟ್ರಸ್ಟಿಗಳಾದ ರಾಮಕೃಷ್ಣ ಗೋಳಿ, ಅನಂತ ಶಾನಭಾಗ, ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಸಂಸ್ಥೆಯು ಪ್ರಾರಂಭವಾದಾಗ ಬೆನ್ನೆಲುಬಾಗಿ ನಿಂತು ಸೂಕ್ತ ಸಲಹೆ ನೀಡಿ ಸಹಕರಿಸಿದ ಜಿ.ಪಿ.ಬಿಳಗಿ, ಅಂಗಸAಸ್ಥೆಯ ಮುಖ್ಯಾಧ್ಯಾಪಕರುಗಳಾದ ಸಾವಿತ್ರಿ ಹೆಗಡೆ, ಸುಜಾತಾ ನಾಯ್ಕ, ಸುಮಾ ಪ್ರಭು, ಪ್ರಾಂಶುಪಾಲರಾದ ಕಿರಣ ಭಟ್ಟ. ಮಾತೃಮಂಡಳಿಯ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರುಗಳಾದ ಗಣೇಶ ಜೋಶಿ, ಅನಿತಾ ಪಟಗಾರ, ಶಾಹಿದಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.