ಅಂಕೋಲಾ: ಉದ್ದೇಶಿತ ಅಲಗೇರಿ ವಿಮಾನ ನಿಲ್ದಾಣ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕಿ ರೂಪಾಲಿ ನಾಯ್ಕ ಜೊತೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಮಾನ ನಿಲ್ದಾಣ ಯೋಜನಾ ನಿರಾಶ್ರಿತರಿಂದ ಅಹವಾಲು ಸ್ವೀಕರಿಸುವ ಸಭೆ ಅಲಗೇರಿ ಈಶ್ವರ ದೇವಸ್ಥಾನದ ಆವಾರದಲ್ಲಿ ನಡೆಸಿದರು.
ಈ ವೇಳೆ ಯೋಜನಾ ನಿರಾಶ್ರಿತರು ಮಾತನಾಡಿ, ಈಗಾಗಲೇ ಇಲ್ಲಿನ ನಿವಾಸಿಗಳಿಗೆ ನೋಟೀಸಗಳನ್ನು ನೀಡಲಾಗಿದ್ದು ಪರಿಹಾರ ಮತ್ತು ಪುನರ್ವಸತಿ ಬಗ್ಗೆ ಸ್ಪಷ್ಟ ಮಾಹಿತಿ ಇರದ ಕಾರಣ ಅದನ್ನು ಬಗೆಹರಿಸಬೇಕೆಂದು ನಿರಾಶ್ರಿತರು ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಮತ್ತು ನಿರಾಶ್ರಿತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ನಿರಾಶ್ರಿತರ ಮಾತಿಗೆ ಮಾತು ಬೆರೆಸಿ ಅವರನ್ನು ಸಮಾಧಾನಪಡಿಸಿ ಸಭೆಯನ್ನು ಮುಂದುವರಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ನಿರಾಶ್ರಿತರ ಸಮಸ್ಯೆಗಳನ್ನು ತಿಳಿದು ಸರಕಾರದ ಮಟ್ಟದಲ್ಲಿ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಾಗುವದು. ಹೀಗಾಗಿ ಎಲ್ಲ ಬಗೆಯ ಸಮಸ್ಯೆಗಳನ್ನು ನಾನು ನಿಮ್ಮಿಂದ ಮತ್ತು ಅಧಿಕಾರಿಗಳಿಂದ ತಿಳಿದಿದ್ದೇನೆ ಎಂದರು.

RELATED ARTICLES  ‘ಶಿರಸಿ ನಮ್ಮ ಹಬ್ಬ’ ನೋಡಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತ : ಓರ್ವ ಸಾವು.


ಈ ವೇಳೆ ನಿರಾಶ್ರಿತರ ಪರವಾಗಿ ಸುರೇಶ ನಾಯಕ ಅಲಗೇರಿ ಮಾತನಾಡಿ, ಭೂಮಿಯ ಮೌಲ್ಯ ಮತ್ತು ಕಟ್ಟಗಳ ಮೌಲ್ಯ ನಿರ್ಧಾರ ಮಾಡಿದ್ದು ಸರಿಯಿಲ್ಲ. ಅದನ್ನು ರದ್ದುಗೊಳಿಸಿ ಮರು ಮೌಲ್ಯಮಾಪನ ಮಾಡಿಸಬೇಕು ಎಂದರು. ದೇವರಾಯ ನಾಯಕ ಮಾತನಾಡಿ ಅಲಗೇರಿ, ಭಾವಿಕೇರಿ ಮತ್ತು ಬೇಲೆಕೇರಿ ಮೂರು ಗ್ರಾಮಗಳ ಭೂಮಿ ಮತ್ತು ಕಟ್ಟಡಗಳ ಮೌಲ್ಯಮಾಪನಗಳಲ್ಲಿ ವ್ಯತ್ಯಾಸವಿದೆ ಅದನ್ನು ರದ್ದುಪಡಿಸಿ ಏಕರೂಪದ ಮೌಲ್ಯ ನಿರ್ಧರಿಸಬೇಕು ಎಂದರು.

ಮನೆಯ ಮೌಲ್ಯದ ಮೂರುಪಟ್ಟು ಮಾಡಿ ಸವಕಳಿ ತೆಗೆಯಬೇಕು. ಅಥವಾ ಸವಕಳಿ ಬಿಟ್ಟು ಮನೆಯ ಮೌಲ್ಯದ ಎರಡು ಪಟ್ಟು ಮಾಡಬೇಕು. ಭದ್ರಾ ಹುಲಿ ಯೋಜನೆಗೆ ನೀಡಿರುವ ಭೂಮಿಗೆ ಭೂಮಿ ಪರಿಹಾರ ನೀಡಿದಂತೆ ಇಲ್ಲಿಯ ರಾಷ್ಟ್ರೀಯ ಯೋಜನೆಗೂ ಅನ್ವಯವಾಗುವಂತೆ ಭೂಮಿಗೆ ಭೂಮಿ ಕೊಡಬೇಕು. ಅಲಗೇರಿ ಪಂಚಾಯತ ವ್ಯಾಪ್ತಿಯಲ್ಲೇ ಪರ್ಯಾಯ ಕೃಷಿ ಜಮೀನು ನೀಡಬೇಕು. ಯೋಜನೆ ಪೂರ್ಣಗೊಳ್ಳುವವರೆಗೆ ನಿರಾಶ್ರಿತ ಕುಟುಂಬದ ಯುವಕರಿಗೆ ಬೇರೆ ಯೋಜನೆಯಲ್ಲಿ ಉದ್ಯೋಗಾವಕಾಶ ನೀಡಬೇಕು ಮುಂತಾದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.

RELATED ARTICLES  ನೂರಾರು ಮಕ್ಕಳ ಬ್ಯಾಗ್ ನಲ್ಲಿ ಇತ್ತು ಮೊಬೈಲ್ : ರೈಡ್ ಮಾಡಿದಾಗ ಪ್ರಾಂಶುಪಾಲರೇ ಶಾಕ್..!


ನಿರಾಶ್ರಿತರ ಬೇಡಿಕೆಗಳನ್ನು ಆಲಿಸಿದ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಆಯುಕ್ತರು, ವಿಶೇಷ ತಹಶೀಲ್ದಾರರು, ಅಂಕೋಲಾ ತಹಶೀಲ್ದಾರರು, ಲೋಕೋಪಯೋಗಿ ಇಂಜೀನೀಯರ ಇವರ ಜೊತೆ ಸಮಾಲೋಚಿಸಿ ನಿಯಮಗಳ ಪ್ರಕಾರ ಏನೇನು ಸಾದ್ಯತೆಗಳಿವೆ ಎಂಬುದನ್ನು ಚರ್ಚಿಸಿದರು. ನಂತರ ಮಾತನಾಡಿದ ಅವರು ಜ.26ರಂದು ನಿರಾಶ್ರಿತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಹೊಸ ಪ್ರಸ್ತಾವನೆಯನ್ನು ರೂಪಿಸಿ ಸದ್ಯದಲ್ಲೇ ಶಾಸಕರು, ಉಸ್ತುವಾರಿ, ಕಾರ್ಮಿಕ ಸಚಿವರು, ಸ್ಪೀಕರ್ ಇವರೆಲ್ಲ ಸೇರಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸರಕಾರದ ಮಟ್ಟದಲ್ಲಿ ಬಗೆಹರಿಸುವಂತೆ ಪ್ರಯತ್ನ ಮಾಡುತ್ತೇನೆ ಎನ್ನುವ ಭರವಸೆ ನೀಡಿದರು.