ಅಂಕೋಲಾ : ಉತ್ತರ ಕನ್ನಡದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು ಇಂದು ಸಹ ಅಂತಹುದೇ ಪ್ರಕರಣ ಒಂದು ವರದಿಯಾಗಿದೆ. ರಸ್ತೆಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಟ್ಯಾಂಕರ್ ವೊಂದು ಡಿಕ್ಕಿ ಹೊಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ ಬಾಳೆಗುಳಿ ಬಳಿ ನಡೆದಿದೆ. ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸರಿಯಾಗಿದ್ದು, ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಮೊಲಾಸಿಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿ ಡಿವೈಡರ್ ದಾಟಿಕೊಂಡು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಟ್ಯಾಂಕರ್ ಮುಂಭಾಗ ಹಾಗೂ ಅಪಘಾತಕ್ಕೊಳಗಾದ ಲಾರಿಯ ಹಿಂಭಾಗ ಸಂಪೂರ್ಣ ಹಾನಿಯಾಗಿದ್ದು, ಈ ಭಯಾನಕ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.