ಬಳ್ಳಾರಿ: ಬಳ್ಳಾರಿಯಲ್ಲಿ ತೆಲುಗು ಮೂಲದ ಗಾಯಕಿ ಮಂಗ್ಲಿ ಕಾರಿನ ಮೇಲೆ ಶನಿವಾರ ರಾತ್ರಿ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಬಳ್ಳಾರಿ ಉತ್ಸವದಲ್ಲಿ ಹಾಡಲೆಂದು ಗಾಯಕಿ ಮಂಗ್ಲಿ ಆಗಮಿಸಿದ್ದರು. ಹಾಡು ಮುಗಿಸಿ ವೇದಿಕೆಯ ಹಿಂಭಾಗಕ್ಕೆ ಹೋಗುವಾಗ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಅವರನ್ನು ನೋಡಲು ಮುಗಿಬಿದ್ದರು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟಿಗೂ ನುಗ್ಗಿದ್ದರು. ಆಗ ಗದ್ದಲ ಉಂಟಾಯಿತು. ಪೊಲೀಸರು ಲಘು ಲಾಟಿ ಪ್ರಹಾರ ಮಾಡಿ ಜನರನ್ನು ಚದುರಿಸಬೇಕಾಯಿತು. ನಂತರ ಗಾಯಕಿ ಮಂಗ್ಲಿ ಅವರು ಕಾರಿನಲ್ಲಿ ಹೊರಟು ಹೋಗುವಾಗ ಕೆಲವರು ಅವರ ಕಾರಿಗೆ ಕಲ್ಲೆಸೆದಿದ್ದಾರೆ. ಕಾರಿನ ಗ್ಲಾಸುಗಳು ಪುಡಿಯಾಗಿವೆ ಎಂದು ವರದಿಯಾಗಿದೆ.
ಗಾಯಕಿ ಮಂಗ್ಲಿ ಕನ್ನಡ ಸೇರಿದಂತೆ ಬಹುಭಾಷೆಯ ಸಿನಿಮಾಗಳಿಗೆ ಹಾಡುತ್ತಾರೆ.