ಕುಮಟಾ : ಉತ್ತರಕನ್ನಡದ ಕೊಂಕಣಿ ಭಾಷಿಕ ಭಂಡಾರಿ ಸಮಾಜದ ಬೃಹತ್ ಸಮ್ಮೇಳನವನ್ನು ಕಾರವಾರದಲ್ಲಿ ಹಮ್ಮಿಕೊಂಡು ಸಮಾಜಕ್ಕೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳ ಕುರಿತಾದ ಬೇಡಿಕೆಗಳನ್ನು ಮುಂದಿಡಲಾಗುವುದು. ಜಿಲ್ಲೆಯಾದ್ಯಂತ ಇರುವ ಸಮಾಜ ಬಾಂಧವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಉತ್ತರಕನ್ನಡ ಜಿಲ್ಲಾ ಭಂಡಾರಿ ಸಮಾಜದ ಅಧ್ಯಕ್ಷರಾದ ಕೇಶವ ಡಿ ಪೆಡ್ನೇಕರ್ ಕರೆನೀಡಿದರು. ಅವರು ದಿನಾಂಕ 22 ಜನವರಿ 2023ರ ಭಾನುವಾರ ಕುಮಟಾದ ನೆಲ್ಲಿಕೇರಿ ಸಭಾಭವನದಲ್ಲಿ ಜರುಗಿದ ಕುಮಟಾ ತಾಲೂಕಾ ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮಹಾರಾಷ್ಟ್ರ ಗೋವಾ ಮೊದಲಾದ ರಾಜ್ಯಗಳಲ್ಲಿ ಭಂಡಾರಿಗಳ ಸಂಘಟನೆ ಉತ್ತಮವಾಗಿದೆ.ರಾಜ್ಯದಲ್ಲೂ ಅದೇ ರೀತಿಯ ಸಂಘಟನೆ ನಿರ್ಮಿಸಬೇಕಾಗಿದೆ.ಕೇಂದ್ರ ಮಂತ್ರಿಗಳಾದ ಶ್ರೀಪಾದ ನಾಯಕ ,ಚಲನ ಚಿತ್ರ ನಟ ನಾನಾ ಪಾಟ್ನೇಕರ್, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಸರು ಪಡೆದ ಸಮಾಜದ ಹೆಮ್ಮೆಯ ರಾಘವೇಂದ್ರ ಮೋಹನ ದೇಶಭಂಡಾರಿ ಮೊದಲಾದ ಪ್ರಮುಖರನ್ನು ಆಹ್ವಾನಿಸಲಾಗುವುದು.

RELATED ARTICLES  ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತೊಂದರೆ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ.

ನಮ್ಮ ಸಮಾಜಕ್ಕೆ ಸರಕಾರದಿಂದ ಯಾವುದೇ ಮಹತ್ವದ ಸ್ಥಾನಮಾನ ದೊರೆತಿಲ್ಲ ನಿಗಮಮಂಡಳಿ,ಅಕಾಡೆಮಿ, ಪ್ರಾಧಿಕಾರ ಮೊದಲಾದ ಅವಕಾಶಗಳಿಂದ ವಂಚಿತ ಸಮಾಜದ ಸಾಮರ್ಥ್ಯವನ್ನು ತೋರಿಸಲು ಸಕಾಲ ಆಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಸಂಧ್ಯಾಮಣಕೀಕರ್ ಸಮಾಜವು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದು ಬರಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಯಟ್ ಕುಮಟಾದ ಉಪನ್ಯಾಸಕ ಪರಮೇಶ್ವರ ತಿಮ್ಮಪ್ಪ ದೇಶಭಂಡಾರಿ ಅವರು ಭಂಡಾರಿ ಸಮಾಜದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಗೇ ವಿದ್ಯಾಭ್ಯಾಸ ಕೊನೆಗೊಳಿಸುತ್ತಿದ್ದಾರೆ. ಪ್ರತಿಭಾವಂತರಿಗೆ ಶಿಕ್ಷಣ ಪಡೆಯಲು ಹಲವಾರು ಅವಕಾಶಗಳಿವೆ.ಅಜೀಂಪ್ರೇಮ್ ಜೀ ಫೌಂಡೇಶನ್ ಮುಂತಾದ ಸಂಸ್ಥೆಗಳು ಬಡವರಿಗೆ ನೆರವು ನೀಡುತ್ತಿವೆ.ಮಹಿಳಾ ಸಂಘದವರು ತಿಂಗಳಿಗೊಮ್ಮೆ ಬೌದ್ಧಿಕ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.

ಹಿರಿಯ ನ್ಯಾಯವಾದಿ ಮಾಜಿ ಅಧ್ಯಕ್ಷ ವಿ ಎಂ ಭಂಡಾರಿ ಹೊನ್ನಾವರ ಇವರು ಸಮಾಜದ ಮಾತೆಯರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕೆಂದರು. ಕಾರ್ಯಕ್ರಮದಲ್ಲಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,ವೈದ್ಯಕೀಯವೇತನ ವಿತರಿಸಲಾಯಿತು.ಶ್ರೀಮತಿ ಅನುಷಾ ಅರುಣ ಮಣಕೀಕರ್ ಅವರು ಶಿಕ್ಷಣ ನಿಧಿಗಾಗಿ 50 ಸಾವಿರ ದೇಣಿಯನ್ನು ನೀಡಿದರು. ಶಿಕ್ಷಕಿ ಹೇಮಾ ಸಂದೀಪ ದೇಶಭಂಡಾರಿ, ದೇಹದಾಢ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಕಂಚಿನ ಪದಕ ಪಡೆದ ದೀಪಕ ಗಾಂವ್ಕರ್ ಅವರನ್ನು ಸನ್ಮಾನಿಸಲಾಯಿತು.

RELATED ARTICLES  ಬೈಕ್ ಟೈರ್ ನ ಜಾಹಿರಾತಿನ ಬಗ್ಗೆ ಸಂಸದ ಅನಂತ ಕುಮಾರ್ ಹೆಗಡೆ ಅಸಮಾಧಾನ

ವೇದಿಕೆಯಲ್ಲಿ ಕಾರವಾರ ತಾಲೂಕ ಭಂಡಾರಿ ಸಮಾಜದ ಅಧ್ಯಕ್ಷ ಮೋಹನ ಕಿಂದಳಕರ್, ಶಿರಸಿಯ ನಾಗರಾಜ ನಾಯ್ಕ, ಮಹಿಳಾ ಪ್ರಮುಖರಾದ ಛಾಯಾ ಜಾವ್ಕರ್,ಸೂಷ್ಮಾ ಗಾಂವ್ಕರ್, ಕುಮಟಾ ತಾಲೂಕ ಅಧ್ಯಕ್ಷ ಶ್ರೀಧರ ಬೀರಕೋಡಿ, ಅರುಣ ಮಣಕೀಕರ್ ಮೊದಲಾದವರು ವೇದಿಕೆಯಲ್ಲಿದ್ದರು.

ಶ್ರೀಧರ ಬೀರಕೋಡಿ ಸ್ವಾಗತಿಸಿದರು.ಚಿದಾನಂದ ಭಂಡಾರಿ ವಂದನಾರ್ಪಣೆ ಗೈದರು.ಗೌರೀಶ ಭಂಡಾರಿ, ಯಶಸ್ವಿನಿ ಮಣಕೀಕರ್,ಹರ್ಷಿತಾ ಭಂಡಾರಿ ಕಾರ್ಯಕ್ರಮ ನಿರ್ವಹಣೆ ಗೈದರು.