ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ರಾಷ್ಟ್ರೀಯ ಹೆದ್ದಾರಿಯ ಗುಡಿಗದ್ದೆ ಕ್ರಾಸ್‌ನಲ್ಲಿ ತಡರಾತ್ರಿ ಐವರು ವಾಹನಗಳನ್ನು ಅಡ್ಡಗಟ್ಟಿ ಅವರಿಂದ ಹಣ ಮತ್ತು ಮೊಬೈಲ್ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ದೋಚುವ ಹುನ್ನಾರ ನಡೆಸಿರುವ ಕುರಿತು ತಿಳಿದು ಬಂದ ತಕ್ಷಣ ದಾಳಿ ನಡೆಸಿದ ಪಿಎಸ್‌ಐ ದೇವರಾಜ ಬಿರಾದಾರ ಮತ್ತು ಸಿಬ್ಬಂದಿ, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾತ್ರಿ 11.30ರ ಸುಮಾರಿಗೆ ದೂರವಾಣಿ ಕರೆಯೊಂದು ಬಂದಿದ್ದು ಕರೆ ಮಾಡಿದ ವ್ಯಕ್ತಿ ಬೈಲೂರು ಗುಡಿಗದ್ದೆ ಕ್ರಾಸ್‌ನಲ್ಲಿ ಕೆಲವು ವ್ಯಕ್ತಿಗಳು ಕಬ್ಬಿಣದ ರಾಡ್ ಇತ್ಯಾದಿಗಳನ್ನು ಇಟ್ಟುಕೊಂಡು ದರೋಡೆ ಮಾಡುವ ಉದ್ದೇಶದಿಂದ ನಿಂತುಕೊಂಡಿದ್ದಾರೆ ಎಂದು ತಿಳಿಸಿದ ಮೇರೆಗೆ ಪಿಎಸ್‌ಐ ತಕ್ಷಣ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದರು ಎನ್ನಲಾಗಿದೆ. ಈ ಸಮಯದಲ್ಲಿ ಮೂವರು ಪರಾರಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ ಕಬ್ಬೀಣಡ ರಾಡ್, ಕಾರದ ಪುಡಿ ಪ್ಯಾಕೆಟ್ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಪುಣೆಯ ರಾಜೇಶ ಜಾಧವ (23) ಹಾಗೂ ಪುಣೆಯ ಅರ್ಜುನ್ ಸುಕ್ಳಿ (19) ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳಿಗಳ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಕುರಿತು ದೇವರಾಜ ಬಿರಾದಾರ ಅವರು ನೀಡಿದ ದೂರಿನಂತೆ ಪಿಎಸ್‌ಐ ಪರಮಾನಂದ ಕೊಣ್ಣೂರ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.