ಭಟ್ಕಳ: 9 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಜಿಲ್ಲೆಯ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಶ್ರೀಮಹಾಸತಿ ದೇವಿಯ ಜಾತ್ರೆ ಸೋಮವಾರದಂದು ವಿದ್ಯುಕ್ತವಾಗಿ ಆರಂಭಗೊಂಡಿತು. ಆಡಳಿತಾಧಿಕಾರಿ ಹಾಗೂ ಪ್ರಭಾರಿ ತಹಶೀಲ್ದಾರ ಅಶೋಕ ಭಟ್ಟ ಮಹಾಸತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪ್ರದಾಯದಂತೆ ದೇವಸ್ಥಾನದ ವಿಧಿ-ವಿಧಾನಗಳು ಮುಂಜಾನೆಯಿಂದಲೇ ಆರಂಭಗೊಂಡಿದ್ದವು. ಪ್ರತಿ ವರ್ಷದಂತೆ ಈ ವರ್ಷವೂ ಸಹ ದೇವಾಲಯದ ಗರ್ಭಗುಡಿ, ಆವರಣ ಹಾಗೂ ಪ್ರಾಂಗಣವನ್ನು ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು. ಬಂದಂತಹ ಭಕ್ತರಿಗೆ ದೇವಾಲಯವನ್ನು ಒಂದು ಸುತ್ತು ಬಂದು ದೇವರ ದರ್ಶನ, ಪೂಜೆ ಹಾಗೂ ಹಣ್ಣು- ಕಾಯಿ ಸಮರ್ಪಣೆಗೆ ಆಡಳಿತ ಮಂಡಳಿಯಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಧ್ಯಾಹ್ನ ಮೊದಲ ದಿನ ಭಕ್ತರಿಗೆ ಮಹಾಸತಿ ದೇವಸ್ಥಾನ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಸುತ್ತಮುತ್ತ ಬಗೆಬಗೆ ಅಂಗಡಿಗಳು ತೆರೆದುಕೊಂಡು ಜಾತ್ರೆಗೆ ವಿಶೇಷ ಕಳೆ ತಂದುಕೊಟ್ಟವು. ಹಲವು ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಕಮಿಟಿಯಿಂದ ತಹಶೀಲ್ದಾರ ಅಶೋಕ ಭಟ್ಟ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಮಂಗಳವಾರದಂದು ಜಾತ್ರೆಯ ಎರಡನೇ ದಿನದಂದು ವಿಶೇಷ ಕೆಂಡ ಸೇವೆ ನಡೆಯಲಿದೆ. ದೇವಸ್ಥಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಸೂಸಗಡಿ ಪ್ರಭಾರಿ ಕಂದಾಯ ನಿರೀಕ್ಷಕ ಕೆ.ಶಂಭು, ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷರು ಕಮಿಟಿ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.