ಸಿದ್ದಾಪುರ: ಕೆಇಬಿಯಲ್ಲಿ 15 ವರ್ಷ ಸೇವೆ ಸಲ್ಲಿಸಿ ಕೌಟುಂಬಿಕ ಸಮಸ್ಯೆಯಿಂದ ಮನನೊಂದು ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿ ಪುನೀತ್ ರಾಜಕುಮಾರ್ ಆಶ್ರಯಧಾಮ ಆಶ್ರಮಕ್ಕೆ ಕರೆತರಲಾಗಿದೆ. ತಾಲೂಕಿನ ಕವಂಚೂರ ಬಳಿ ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಇರುವ ಬಗ್ಗೆ ಸಾರ್ವಜನಿಕರು 112ಗೆ ಕರೆ ಮಾಡಿ ವಿಷಯ ತಿಳಿಸಿದಾಗ 112 ಸಿಬ್ಬಂದಿಗಳು ಹೋಗಿ ಈ ವ್ಯಕ್ತಿಯನ್ನು ವಿಚಾರಿಸಿ ಪೊಲೀಸ್ ಠಾಣೆಗೆ ಕರೆತಂದು ಅಲ್ಲಿಂದ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಜೊತೆ ಕಳುಹಿಸಿಕೊಟ್ಟಿದ್ದಾರೆ.
ಈ ವ್ಯಕ್ತಿಯನ್ನು ವಿಚಾರಿಸಲಾಗಿ, ಈತನು ತನ್ನ ಹೆಸರನ್ನು ನಾಗೇಶ ಗೌಡ ಹೊಸುರ್, ತಂದೆ ಮಾಬು ಗೌಡ ನಿಧನರಾಗಿದ್ದಾರೆ. ತಾಯಿ ಯಶೋಧಾ ನಿಧನರಾಗಿದ್ದಾರೆ ಎಂದು ಹೇಳುತ್ತಾನೆ. ಬಿಕಾಂ ಪದವಿ ಪಡೆದು 1998ರಲ್ಲಿ ಕೆಇಬಿಯಲ್ಲಿ ಪುತ್ತೂರಿನಲ್ಲಿ ಜ್ಯೂನಿಯರ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿ ಪುತ್ತೂರು, ಸಾಗರ ಹಾಗೂ ಚಿಕ್ಕಮಗಳೂರಿನಲ್ಲಿ ಕೆಲಸ ನಿರ್ವಹಿಸಿದ್ದೇನೆ ಎಂದು ಹೇಳುತ್ತಿದ್ದಾನೆ. ಈತನಿಗೆ ಮದುವೆಯಾಗಿ 9 ವರ್ಷದ ನಂತರ ಈತನ ಪತ್ನಿ ಈತನನ್ನು ಬಿಟ್ಟು ಈತನ ಸ್ನೇಹಿತನ ಜೊತೆ ಓಡಿ ಹೋಗಿದ್ದಾಳೆ.
ಇದರ ನಂತರ ಅಂದರೆ 8 ವರ್ಷದಿಂದ ಕೆಲಸ ಬಿಟ್ಟು ರಸ್ತೆ ಮೇಲೆ ತಿರುಗುತ್ತಿರುವುದಾಗಿ ತಿಳಿಸಿದ್ದಾನೆ. ತನಗೆ ಅಣ್ಣ, ತಮ್ಮ, ತಂಗಿ ಹಾಗೂ ಬಂಧುಗಳೆಲ್ಲಾ ಇದ್ದು ಯಾರು ಕೂಡ ತನ್ನನ್ನು ಮನೆಯಲ್ಲಿ ಸೇರಿಸಿಕೊಳ್ಳುತ್ತಿಲ್ಲಾ. ತಾನು ಅನಾಥನಾಗಿದ್ದೇನೆ ಎಂದು ಹೇಳುತ್ತಿದ್ದಾನೆ. ಈತನ ಸಂಬoಧಿಕರು ಹಾಗೂ ಪರಿಚಯದವರು ಯಾರಾದರು ಇದ್ದರೆ ಸಿದ್ದಾಪುರ ಪೊಲೀಸ್ ಠಾಣೆಗೆ ಅಥವಾ ಮೊ.ಸಂ: 9481389187 ಗೆ ಸಂಪರ್ಕಿಸಬಹುದು.