ಬೆಂಗಳೂರು: ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಮುಂದೂಡಿ ಆದೇಶ ಹೊರಡಿಸಲಾಗಿದೆ. ಅಲ್ಲದೆ ತಕ್ಷಣದಿಂದ ಜಾರಿಗೆ ಬರುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಆದೇಶವನ್ನು ಹೊರಡಿಸಿದೆ. ‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಟಿಪ್ಪಣಿಯಲ್ಲಿನ ಸೂಚನೆಯನ್ವಯ ಪ್ರಸ್ತುತ ಚಾಲ್ತಿಯಲ್ಲಿರುವ ‘ಕೌನ್ಸೆಲಿಂಗ್ ಮುಖಾಂತರ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸಲು ಕೈಗೊಳ್ಳಲಾಗುತ್ತಿರುವ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ ರದ್ದುಗೊಳಿಸಿ ಮುಂದೂಡಲಾಗಿದೆ’ ಎಂದು ಈ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇಂದು ಅಂದರೆ ಜ. 24ರಂದು ಯಾವುದಾದರೂ ಶಿಕ್ಷಕರಿಗೆ ಕೌನ್ಸೆಲಿಂಗ್ನಲ್ಲಿ ಸ್ಥಳ ನಿಯುಕ್ತಿ ಆದೇಶ ನೀಡಿದ್ದಲ್ಲಿ ಸದರಿ ಆದೇಶಗಳನ್ನು ಸಂಬಂಧಿಸಿದ ಉಪನಿರ್ದೇಶಕರು (ಆಡಳಿತ) ರದ್ದುಪಡಿಸಿ ಹಿಂಪಡೆಯಲು ಕ್ರಮವಹಿಸುವುದು. ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಮತ್ತು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅದರಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಪರಿಷ್ಕೃತ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದೂ ಈ ಆದೇಶದಲ್ಲಿ ತಿಳಿಸಲಾಗಿದೆ.