ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನಲ್ಲಿ 74ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಎಲ್ಲಾ ಅಂಗ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಜರುಗಿದ ಈ ಕಾರ್ಯಕ್ರಮದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕರವರು ನೆರವೇರಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯೊಂದಿಗೆ ರೈತಗೀತೆ, ವಂದೇ ಮಾತರಂ ಗೀತೆಗಳ ಸಮೂಹ ಗಾಯನ, ಸಿವಿಎಸ್‌ಕೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನೆರವೇರಿತು. ಗಣರಾಜ್ಯೋತ್ಸವದ ಅಂಗವಾಗಿ ಜರುಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಧ್ವಜಾರೋಹಣ ಸಂದೇಶವನ್ನು ನೀಡಿದ ವಿಶ್ವಸ್ಥರಾದ ಅನಂತ ಶಾನಭಾಗ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವಾಗ ನಮಗಿರುವ ಕರ್ತವ್ಯಗಳನ್ನು ಮರೆಯಬಾರದು. ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ಅರಿತು ನಡೆದರೆ ಪ್ರಜಾಪ್ರಭುತ್ವವು ಯಶಸ್ವಿಯಾಗುವದು. ವಿದ್ಯಾರ್ಥಿಗಳು ರಾಷ್ಟ್ರ ಭಕ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ಸಂಪ್ರೀತ ಹಾಡಿದ ದೇಶಭಕ್ತಿಗೀತೆ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಕಾರ್ಯಕ್ರಮದಲ್ಲಿ ವಿಶ್ವಸ್ಥರುಗಳಾದ ಗಜಾನನ ಕಿಣಿ, ರಾಮಕೃಷ್ಣ ಶಾನಭಾಗ ಗೋಳಿ, ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿ, ಸಂಸ್ಥೆಯ ಮುಖ್ಯಾಧ್ಯಾಪಕರುಗಳು, ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ಚಿದಾನಂದ ಭಂಡಾರಿ, ಶಿವಾನಂದ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ದೈಹಿಕ ಶಿಕ್ಷಕರಾದ ಜಯರಾಜ ಶೇರುಗಾರ ಹಾಗೂ ನಾಗರಾಜ ಭಂಡಾರಿ ಇವರ ನಿರ್ದೇಶನದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರಿಗೂ ಸಂಸ್ಥೆಯ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಕುಮಟಾದ ಮಣಕಿ ಮೈದಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಮತ್ತು ನೃತ್ಯ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆ ಪಡೆಯಿತು.