ಹೊನ್ನಾವರ : ಸಾಲ್ಕೋಡಿನ ಬೊಂಡಕಾರ ಈಶ್ವರ ದೇವಾಲಯದಲ್ಲಿ ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಹಡಿನಬಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಗಾನ – ನಾಟ್ಯ ವೈಭವ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಕೆ.ಎಸ್. ಹೆಗಡೆ ಅರೇಅಂಗಡಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಂಗೀತ ಕಲೆ ಬದುಕಿನ ಕಲೆಯನ್ನು ಕಲಿಸುತ್ತದೆ. ಸಂಗೀತ ನಾವಿನ್ಯತೆಯನ್ನು ನೀಡುತ್ತಲೇ ಇರುತ್ತದೆ. ಸ್ವರಗಳ ಹಲವು ವಿನ್ಯಾಸವೇ ಶಾಸ್ತ್ರೀಯತೆಯನ್ನು ಪ್ರತಿಪಾದಿಸುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಎಂ. ಐ. ಹೆಗಡೆ ಖ್ಯಾತ ವಕೀಲರು ಮಾತನಾಡಿ ಸಂಗೀತ ನಾಟ್ಯಗಳು ಮೌನವಾಗಿ ನಮ್ಮೊಳಗೆ ಆನಂದವನ್ನು ನೀಡುತ್ತದೆ ಎಂದು ರಾಗಶ್ರೀಯ ಕಾರ್ಯಕ್ರಮದ ಕುರಿತು ಅವರ ಮೆಚ್ಚುಗೆ ವ್ಯಕ್ತಪಡಿಸಿದರು. ರಾಗಶ್ರೀ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಕಲಾವಿದನಿಂದ ಕಲೆಯ ಮತ್ತು ಸಂಸ್ಕೃತಿಯ ಜೀವಮಾನದ ಹಸ್ತಾಂತರ ಸಾಧ್ಯ ಆಗುತ್ತದೆ ಎಂದು ಕಾರ್ಯಕ್ರಮದ ಕುರಿತು ಸಂಘಟನೆ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ರಾಗಶ್ರೀ ಕಾರ್ಯದರ್ಶಿ ವಿದ್ವಾನ್ ಎನ್. ಜಿ. ಹೆಗಡೆ, ನಿವೃತ್ತ ಅರಣ್ಯಾಧಿಕಾರಿ ಶ್ರೀಧರ ನಾಯ್ಕ, ಖ್ಯಾತ ತಬಲಾ ವಾದಕರಾದ ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಅವರು ಉಪಸ್ಥಿತರಿದ್ದರು. ನಂತರದಲ್ಲಿ ಶ್ರೀ ವಿನಾಯಕ ಭಟ್ಟ ಹಾಗೂ ಶ್ರೀ ಕೃಷ್ಣಪ್ರಸಾದ ಹೆಗಡೆ ತಬಲಾ ಸೋಲೋ ಹಾಗೂ ಶ್ರೀ ಪ್ರಸನ್ನ ಭಟ್ಟ ಉಡುಪಿ ಹಾಗೂ ಸೌಮ್ಯ ಶೇಟ್, ರಂಜಿತಾ ನಾಯ್ಕ, ಶ್ರೀನಿಧಿ ಹೆಗಡೆ, ಗೀತಾ ಹೆಗಡೆ, ಹಾಗೂ ಪ್ರತಿಭಾ ಹೆಗಡೆ ಇವರ ಸುಗಮ ಸಂಗೀತ ಜನ-ಮನ ರಂಜಿಸಿತು. ಶಾಸ್ತ್ರೀಯ ಸಂಗೀತದಲ್ಲಿ ಸಂಗೀತಾ ನಾಯ್ಕ ಸಂಗೀತ ಉಪನ್ಯಾಸಕರು ಎಸ್. ಡಿ. ಎಂ. ಕಾಲೇಜ್ ಹೊನ್ನಾವರ ಇವರು ರಾಗ ರಾಗೇಶ್ರೀಯೊಂದಿಗೆ ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಇವರಿಗೆ ಅಷ್ಟೇ ಉತ್ತಮವಾಗಿ ಶ್ರೀ ವಿನಾಯಕ ಭಟ್ಟ ತಬಲಾ ಸಾಥನ್ನು ಹಾಗೂ ಶ್ರೀ ಹರೀಶ್ಚಂದ್ರ ನಾಯ್ಕ ಸಂವಾದಿನಿ ಸಾಥ್ ನೀಡೀದರು. ಪ್ರಥಮ ಭಟ್ಟ ಹಾಗೂ ಸಮರ್ಥ ಹೆಗಡೆ ತಾಳದಲ್ಲಿ , ಭಾಗ್ಯಲಕ್ಷ್ಮೀ ಭಟ್ಟ ತಾನ್ಪೂರದಲ್ಲಿ ಸಹಕರಿಸಿದರು. ನಂತರ ಪೂಜಾ ಹೆಗಡೆ ಇವರು ಅತ್ಯುತ್ತಮವಾಗಿ ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮವು ಅಪಾರ ಶೋತ್ರುಗಳ ಮನ ತಣಿಸಿತು. ಪ್ರಾಧ್ಯಾಪಕರಾದ ಶ್ರೀ ಕೆ. ಎಸ್. ಹೆಗಡೆ ಗುಮ್ಮೇಕೇರಿ ನಿರೂಪಿಸಿದರೆ ಗೆಳೆಯರ ಬಳಗದ ಶ್ರೀ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು ಹಾಗೂ ಶ್ರೀ ರಾಘವ ಹೆಗಡೆ ವಂದಿಸಿದರು. ಗೆಳೆಯರ ಬಳಗದ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಯಿತು.