ಕಾರವಾರ: ಇಲ್ಲಿನ ಕೋಡಿಬಾಗ ಕಾಳಿ ಸೇತುವೆಯ
ಬಳಿ ನದಿಯ ನೀರಿನಲ್ಲಿ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಸಿಕ್ಕ
ಸುಮಾರು 40 ರಿಂದ 45 ವರ್ಷದ ಅಪರಿಚಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಮೃತಳ ಪರಿಚಯ ಇದ್ದವರು ಶಹರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ನಿರೀಕ್ಷಕರು ಕೋರಿದ್ದಾರೆ.
ಕಳೆದ ಜನವರಿ 26 ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಕೋಡಿಬಾಗ ಕಾಳಿ ಸೇತುವೆಯ ಬಳಿ ಕಾಳಿ ನದಿಯ ನೀರಿನಲ್ಲಿ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯನ್ನು ಕಾಳಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಅಳವೇವಾಡದ ಮೀನುಗಾರರು ರಕ್ಷಣೆ ಮಾಡಿ ನಂತರ 108 ಅಂಬ್ಯುಲೆನ್ಸ್ ಮೂಲಕ 04-30 ಗಂಟೆಯ ಸುಮಾರಿಗೆ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದರು. ಚಿಕಿತ್ಸೆಯಲ್ಲಿರುವ ಮಹಿಳೆಯು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ಮಹಿಳೆಯ ಹೆಸರು ವಿಳಾಸದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಈ ಅಪರಿಚಿತ ಮಹಿಳೆ ಜನವರಿ 27 ರಂದು ಮೃತ ಪಟ್ಟಿದ್ದಾರೆ.
ಈ ಅಪರಿಚಿತ ಮಹಿಳೆಯ ವಾರಸುದಾರರ ಪತ್ತೆಗೆ ಪೊಲೀಸರು ಪ್ರಯತ್ನಿಸಿದ್ದು, ಈ ಮಹಿಳೆಯ ಹೆಸರು, ವಿಳಾಸದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೃತ ಅಪರಿಚಿತ ಮಹಿಳೆಯ ಬಗ್ಗೆ, ಆಕೆಯ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸ್ ನಿರೀಕ್ಷಕರು ಕಾರವಾರ ಶಹರ ಠಾಣೆ ಮೊ.ನಂ; 9480805230, ಪೊಲೀಸ್ ಉಪ ನಿರೀಕ್ಷಕರು, ಕಾರವಾರ ಶಹರ ಠಾಣೆ ಮೊ.ನಂ 9480805245, ಕಾರವಾರ ಶಹರ ಪೊಲೀಸ್ ಠಾಣೆ: 08382-226333 ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.