ಸಿದ್ದಾಪುರ: ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ.ಪಂಗೆ ಆದಾಯವಾಗಿರುವ ತೆರಿಗೆ ಹಾಗೂ ಮಳಿಗೆಗೆಳ ಬಾಡಿಗೆ ಹಣವನ್ನು ಕಾಲಕ್ಕೆ ಸರಿಯಾಗಿ ವಸೂಲಿ ಮಾಡಬೇಕು. ಹಣವನ್ನು ನೀಡದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಪ.ಪಂ. ಸದಸ್ಯರು ಸೂಚನೆ ನೀಡಿದರು.
ಪ.ಪಂ. ಅಧ್ಯಕ್ಷೆ ಸುಮನಾ ಕಾಮತ್ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ಟಿ.ನಾಯ್ಕ, ಸದಸ್ಯರಾದ ಕೆ.ಜಿ.ನಾಯ್ಕ, ಕರೀಂ ಸಾಬ್ ಮತ್ತಿತರರು ತೆರಿಗೆ ವಸೂಲಿ ಕುರಿತು ತೀವೃ ಆಕ್ಷೇಪವ್ಯಕ್ತಪಡಿಸಿದರು. ಎಲ್ಲ ತೆರಿಗೆ ಸೇರಿ 9ಲಕ್ಷ ಹಾಗೂ ಮಳಿಗೆಗಳ ಬಾಕಿ 9ಲಕ್ಷ ರೂಗಳಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದಾಗ ಪ್ರತಿ ತಿಂಗಳು ತೆರಿಗೆ 2 ಲಕ್ಷರೂಗಳಿಗಿಂತಲೂ ಹೆಚ್ಚಾಗುತ್ತದೆ. ಆದರೆ ಒಂದು ಲಕ್ಷವೂ ಸರಿಯಾಗಿ ವಸೂಲಿ ಆಗುತ್ತಿಲ್ಲ. ಇನ್ನು ಮುಂದೆ ಯಾವುದೇ ಮಾನವೀಯತೆ ತೋರದೇ ಅಧಿಕರಿಗಳು ತೆರಿಗೆ ಹಾಗೂ ಮಳಿಗೆ ಬಾಡಿಗೆ ವಸೂಲಿ ಮಾಡಬೇಕು. ಇಲ್ಲಿದಿದ್ದರೆ ಅವರ ಅಂಗಡಿ ವಿದ್ಯುತ್ ಕಡಿತಗೊಳಿಸಿ. ನೋಟಿಸ್ ನೀಡಿ ಅದಕ್ಕೂ ಜಗ್ಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಿ ಎಂದು ಕೆ.ಜಿ.ನಾಯ್ಕ ಹಾಗೂ ಸದಸ್ಯರು ಮುಖ್ಯಾಧಿಕಾರಿ ಸತೀಶ್ ಅವರಿಗೆ ಸೂಚನೆ ನೀಡಿದರು. ಕೆಲವೊಮ್ಮೆ ಅಧಿಕಾರಿಗಳ ನಿರ್ಲಕ್ಷವೂ ಕಾರಣವಾಗಿದೆ ಎಂದು ಮಾರುತಿ ನಾಯ್ಕ ತೀವೃ ಆಕ್ಷೇಪ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕೆಲವು ಅಂಗಡಿಯವರು ಅಂಗಡಿ ಎದರು ಶೀಟ್ ಹಾಕಿ ಅಂಗಡಿ ಮುಂದುವರೆಸಿದ್ದು ಇದರಿಂದ ತೊಂದರೆ ಆಗುತ್ತಿದೆ. ಕೂಡಲೇ ಹಾಕಿರುವ ಶೀಟ್ ತೆಗೆಯುವಂತೆ ಸೂಚನೆ ನೀಡಬೇಕು ಎಂದು ಸದಸ್ಯರು ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಪಟ್ಟಣದಲ್ಲಿ ರಾತ್ರಿ ಸೈಕಲ್ ಅಂಗಡಿ ಇಡುವವರು ಕಸವನ್ನು ಬೆಳಗ್ಗೆ ಪಟ್ಟಣದ ಹೊರ ವಲಯದ ಕೆರೆ ಕಟ್ಟೆ, ರಸ್ತೆ ಅಂಚಿಗೆ ಬೀಸಾಡಿ ಹೋಗುತ್ತಿದ್ದು ಇದರಿಂದ ತೊಂದರೆ ಆಗುತ್ತಿದೆ. ಅಂಥವರನ್ನು ಗುರುತಿಸಿ ಅವರಿಗೆ ಸೂಚನೆ ನೀಡುವಂತೆ ಗುರುರಾಜ ಶಾನಭಾಗ ತಿಳಿಸಿದರು. ಪಟ್ಟಣದಲ್ಲಿ ಸ್ವಚ್ಛತೆ, ಚರಂಡಿ ವ್ಯವಸ್ಥೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಿತು.