ಕುಮಟಾ : ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತಾಲೂಕಿನಲ್ಲಿ ಗುರುತಿಸಿಕೊಂಡಿರುವ ಸ್ವಸ್ತಿ ಪ್ರಕಾಶನ ತನ್ನ ಹತ್ತನೇ ವರ್ಷದ ಹೊಸ್ತಿಲಿನಲ್ಲಿದ್ದು, ಇದೇ ಬರುವ ಫೆಬ್ರವರಿ 5 ಭಾನುವಾರ ಮಧ್ಯಾಹ್ನ 3:30 ಕ್ಕೆ ತಾಲೂಕಿನ ನಾದಶ್ರೀ ಕಲಾ ಕೇಂದ್ರದ ಸಭಾಭವನದಲ್ಲಿ ತನ್ನ ದಶಮಾನೋತ್ಸವ ಸಂಭ್ರಮ ದ ನಿಮಿತ್ತ ಎರಡು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಾ. ನವೀನ್ ಗಂಗೋತ್ರಿಯವರ ‘ ಕಥಾಗತ’ ಹಾಗೂ ಶ್ರೀಮತಿ ಸುಧಾ ಎಂ ಅವರ ‘ಅಪೂರ್ಣವಲ್ಲ.’ ಇವೆರಡೂ ಕೃತಿಗಳು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಖ್ಯಾತ ವಾಗ್ಮಿ, ನಿರ್ದೇಶಕ, ನಟ, ಸಾಹಿತಿ ಎಸ್. ಎನ್. ಸೇತುರಾಂ “ಕಥಾಗತ” ಕೃತಿ ಅನಾವರಣ ಮಾಡಲಿದ್ದು, ಹೊಸದಿಗಂತ ಪತ್ರಿಕೆ ಯ ಮುಖ್ಯ ಸಂಪಾದಕ ಹಾಗೂ ಖ್ಯಾತ ಅಂಕಣಕಾರರೂ ಆಗಿರುವ ವಿನಾಯಕ ಭಟ್ಟ ಮೂರೂರು “ಅಪೂರ್ಣವಲ್ಲ” ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿ, ವಿಮರ್ಶಕ ಡಾ. ಶ್ರೀಧರ್ ಬಳಗಾರ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯರಾದ ನಿತ್ಯಾನಂದ ಹೆಗಡೆ ಹಾಗೂ ಸಾಹಿತಿ ಶ್ರೀಮತಿ ಸುಧಾರಾಣಿ ನಾಯ್ಕ ಅನಾವರಣಗೊಳ್ಳಲಿರುವ ಕೃತಿಗಳ ಕುರಿತು ಮಾತನಾಡಲಿದ್ದಾರೆ. ಕೃತಿಕಾರರಾದ ಡಾ. ನವೀನ ಗಂಗೋತ್ರಿ ಹಾಗೂ ಶ್ರೀಮತಿ ಸುಧಾ ಎಂ ಸಭೆಯಲ್ಲಿ ಇರಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಸಂಜೆ ಎಂ. ಪೂರ್ವಿತಾ ಹಾಗೂ ವರ್ಣ ಕ್ಲಾಸಿಕಲ್ ಆನ್ಲೈನ್ ಭರತನಾಟ್ಯ ವಿದ್ಯಾರ್ಥಿ ಗಳಿಂದ ನೃತ್ಯಪ್ರದರ್ಶನ, ಶ್ವೇತಾ ಭಟ್ ಸಂಗಡಿಗರಿಂದ ಸುಗಮಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಹಿತ್ಯದ ರಸಾನುಭವ ಸವಿಯಬೇಕೆಂದು ಸ್ವಸ್ತಿ ಪ್ರಕಾಶನದ ಸಂಚಾಲಕರಾದ ಶ್ರೀಮತಿ ಪ್ರಿಯಾ ಎಂ. ಕಲ್ಲಬ್ಬೆ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.