ಕಾರವಾರ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜ್ಯದ 76 ಗ್ರೇಡ್-1 ತಹಸೀಲ್ದಾರರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ.
ವರ್ಗವಾದವರಲ್ಲಿ ಕಾರವಾರದ ತಹಸೀಲ್ದಾರ್ ಎನ್.ಎಫ್.ನೊರೊನಾ ಮತ್ತು ಯಲ್ಲಾಪುರದ ತಹಸೀಲ್ದಾರ ಶ್ರೀಕೃಷ್ಣ ಕಾಯ್ಕರ್, ಹೊನ್ನಾವರದ ತಹಸೀಲ್ದಾರ್ ನಾಗರಾಜ ನಾಯ್ಕಡ ಮತ್ತು ಸಿದ್ದಾಪುರ ತಹಸೀಲ್ದಾರ ಸಂತೋಷ ಭಂಡಾರಿಯನ್ನು ಸ್ಥಳ ನಿರೀಕ್ಷೆಯಲ್ಲಿರಿಸಲಾಗಿದೆ.
ದಾಂಡೇಲಿ ತಹಸೀಲ್ದಾರ್ ಎಸ್.ಎಸ್.ಪರಮಾನಂದರನ್ನು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿಗೆ, ಶಿರಸಿ ತಹಸೀಲ್ದಾರ್ ಶ್ರೀಧರ ಮಂದಲಮನಿಯನ್ನು ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿಗೆ ವರ್ಗ ಮಾಡಲಾಗಿದೆ. ಯಲ್ಲಾಪುರ ತಹಸೀಲ್ದಾರ್ ಶ್ರೀಕೃಷ್ಣ ಕಾಲ್ಕರ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಶಂಕರಪ್ಪ ಜಿ.ಎಸ್, ದಾಂಡೇಲಿ ತಹಸೀಲ್ದಾರ್ ಎಸ್. ಎಸ್.ಪರಮಾನಂದ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಧಾರವಾಡ ಕುಂದಗೋಳ ತಹಸೀಲ್ದಾರ ಅಶೋಕ ಶಿಗ್ಗಾವಿ, ಕುಮಟಾ ತಹಸೀಲ್ದಾರ್
ವಿ.ವಿ.ಶೇಣ್ವಿ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಬೆಳಗಾವಿ ರಾಮದುರ್ಗ ತಹಸೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗಣ್ಣನವರ್‌ರನ್ನು ವರ್ಗ ಮಾಡಲಾಗಿದೆ.
ವರ್ಗಾವಣೆಯಿಂದ ಸ್ಥಳ ನಿರೀಕ್ಷಣೆಗಾಗಿ ಬರಲಿರುವ ಅಧಿಕಾರಿಗಳು ಮುಂದಿನ ಸ್ಥಳ ನಿಯುಕ್ತಿಗಾಗಿ ಕಂದಾಯ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ಕಂದಾಯ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.