ಭಟ್ಕಳ: ತಾಲೂಕಿನ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಏಳನೆಯ ವರ್ಷದ ವರ್ಧಂತಿ ಉತ್ಸವ ಚಿತ್ರಾಪುರ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಮಹಾಸ್ವಾಮಿಗಳ ಕೃಪಾಶೀರ್ವಾದಗಳೊಂದಿಗೆ ವೈದಿಕರಾದ ಶ್ರೀ ಕಟ್ಟೆ ತಿಮ್ಮಣ್ಣ ಭಟ್ಟರ ನೇತೃತ್ವದಲ್ಲಿ ದೇವಸ್ಥಾನದ ಮುಖ್ಯ ಪೂಜಾರಿಯವರ ಮುಖೇನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರೊಂದಿಗೆ ಸುಸಂಪನ್ನಗೊಂಡಿತು. ಮುಂಜಾನೆಯಿಂದಲೇ ಆರಂಭಗೊಂಡು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ಕಂಕಣಧಾರಣೆ, ಪರಿಕಲಶಾಧಿ ಸ್ಥಾಪನೆ, ಆದಿವಾಸಾದಿ ಹೋಮಗಳು ವಿಶೇಷವಾಗಿ ಶ್ರೀ ರುದ್ರಹೋಮ, ನವಚಂಡಿಕಾಹೋಮ, ನಾಗಬ್ರಹ್ಮ ಕಲಾವೃದ್ಧಿ ಕಲಶಾಭಿಷೇಕ ಹಾಗೂ ಬಲಿ ಉತ್ಸವಗಳು, ರಾಜೋಪಚಾರ ಸೇವೆ, ಮಹಾಪೂರ್ಣಾಹುತಿ ಕಾರ್ಯಕ್ರಮಗಳು ಮಧ್ಯಾಹ್ನದವರೆಗೂ ನಡೆದವು.
ನಂತರ ಶ್ರೀ ಕ್ಷೇತ್ರದ ಪ್ರಮುಖ ದೇವರುಗಳಾದ ಜಟಕಾ, ಮಹಾಸತಿ, ಪ್ರಧಾನ ಹಾಗೂ ಬ್ರಹ್ಮ ದೇವರುಗಳಿಗೆ ಮಹಾಮಂಗಳಾರತಿ ನಡೆದು ನೆರೆದಿದ್ದ ಭಕ್ತರುಗಳಿಗೆಲ್ಲ ಪ್ರಸಾದ ವಿತರಿಸಲಾಯಿತು. ಬಂದಂತಹ ಭಕ್ತಾದಿಗಳು ಶ್ರೀ ದೇವರುಗಳಿಗೆ ಹಣ್ಣು-ಕಾಯಿ ಸೇವೆ ಸಲ್ಲಿಸಿದರು. ಬಹಳಷ್ಟು ಭಕ್ತರು ಶ್ರೀ ರುದ್ರಹೋಮ ಮತ್ತು ನವಚಂಡಿಕಾಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಅವರುಗಳ ಹೆಸರಿನಲ್ಲಿ ಸಂಕಲ್ಪ ಮಾಡಿಸಿ ವಿಶೇಷವಾಗಿ ಪ್ರಸಾದ ವಿತರಣೆ ಮಾಡಲಾಯಿತು. ಬಂದಂತಹ ಎಲ್ಲ ಭಕ್ತಾದಿಗಳಿಗೂ ಮಹಾಅನ್ನಸಂತರ್ಪಣೆ ಮಾಡಲಾಯಿತು. ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವರ ಪ್ರಸಾದಭೋಜನ ಸ್ವೀಕರಿಸಿದರು. ಕೆಲವು ಭಕ್ತಾದಿಗಳು ಅನ್ನದಾನಕ್ಕೆ ಅಕ್ಕಿ, ಕಾಯಿ, ಬೆಲ್ಲ, ತರಕಾರಿ ಹಾಗೂ ಇನ್ನಿತರ ವಸ್ತು ಮತ್ತು ಧನಸಹಾಯದ ದೇಣಿಗೆ ನೀಡುವುದರ ಮೂಲಕ ತಮ್ಮತಮ್ಮ ಸೇವೆಯನ್ನು ನೀಡಿದರು.
ರಾತ್ರಿ ರಂಗಪೂಜೆ, ಭೂತಬಲಿ, ಮಹಾಪ್ರಾರ್ಥನೆ ಹಾಗೂ ಇನ್ನಿತರ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಈ ಎಲ್ಲ ಕಾರ್ಯಕ್ರಮಕ್ಕೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ, ಸರ್ವಸದಸ್ಯರು ಹಾಗೂ ದೀಪೋತ್ಸವ ಸಮಿತಿಯವರು ಸಹಕರಿಸಿದರು. ಪೂಜಾರಿ ಕುಟುಂಬದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಊರಿನ ಹಾಗೂ ಪರ ಊರಿನ ಅನೇಕ ಭಕ್ತಾದಿಗಳು ಈ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲೂ ಹಾಜರಿದ್ದರು.
ವರದಿ: ರಾಮ ಹೆಬಳೆ, ಶೇಡಬರಿ, ಭಟ್ಕಳ