ಕುಮಟಾ: ತಾಲೂಕಿನ ದೀವಗಿಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಿ ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನೆ ಅಷ್ಟಬಂಧ ಮಹೋತ್ಸವ ಶನಿವಾರ ನಡೆಯಿತು. ಅಘನಾಶಿನಿ ನದಿ ತಟದ ದೀವಗಿಯಲ್ಲಿ ಅನಾದಿಕಾಲದಿಂದಲೂ ನವದುರ್ಗಾ ಸ್ಥಾನವಿದ್ದು ಪ್ರಧಾನವಾಗಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ಸನ್ನಿಧಿಯು ಪ್ರಸಿದ್ದಿಯನ್ನು ಪಡೆದಿದೆ.ಈ ಹಿಂದಿನ ದೇವಾಲಯದ ಕಟ್ಟಡ ಅತ್ಯಂತ ಹಳೆಯದಾಗಿದ್ದು, ನೂತನ ಕಟ್ಟಡ ನಿರ್ಮಿಸಿ ದೇವರುಗಳನ್ನು ಪುನ: ಪ್ರತಿಷ್ಠೆ ಮಾಡಲಾಯಿತು.
ಜನವರಿ 31 ರಿಂದ ಆರಂಭಗೊಂಡು ಧಾರ್ಮಿಕ ವಿಧಿವಿಧಾನಗಳಾದ ನಾಂದಿ,ಕಲಶ ಪ್ರತಿಷ್ಠೆ, ಪುಣ್ಯಾಹವಾಚನ, ಶಾಂತಿಕಾ ಆರಾಧನೆ, ನವಗ್ರಹ ಸ್ಥಾಪನೆ,ಕ್ಷೇತ್ರಬಲಿ, ಪೀಠ ಶುದ್ದ ಹವನ ,ಕಲಾವೃದ್ದಿ,ಪ್ರತಿಷ್ಠಾಪನೆ, ಚಂಡಿಕಾಹವನ, ಪೂರ್ಣಾಹುತಿ, ಗ್ರಾಮಬಲಿ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.ಶನಿವಾರ ಮುಂಜಾನೆ ನಿತ್ಯವಿಧಿ ಸಹಿತ ದೇವರಿಗೆ ಕಲಾಶಾಭಿಷೇಕ, ಅಲಂಕಾರ, ಕುಂಕುಮಾರ್ಚನೆ, ಉಡಿಸೇವೆ, ಪೂರ್ಣಾಹುತಿ, ಮಂಗಳಾರತಿ, ಹಣ್ಣು ಕಾಯಿ,ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಈ ವೇಳೆ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದುಕೊಂಡು ಹರಕೆಯನ್ನು ಸಲ್ಲಿಸಿ ಪುನೀತರಾದರು.