ಕುಮಟಾ : ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅಗತ್ಯವಾಗಿದ್ದು, ಕ್ರೀಡಾಕೂಟಗಳು ಸ್ನೇಹ ಬಳಗವನ್ನು ಹೆಚ್ಚಿಸುವ ಮಾಧ್ಯಮವೂ ಆಗಿದೆ ಎಂದು ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿನಾಯಕ ಭಟ್ಟ ಮೂರೂರು ಹೇಳಿದರು. ಅವರು ಎಲೈಟ್ ಸ್ಪೋರ್ಟ್ಸ್ ಕ್ಲಬ್ ಮೂರೂರು ಹಾಗೂ ಊರನಾಗರಿಕರ ಆಶ್ರಯದಲ್ಲಿ ಮೂರೂರಿನ ಗೋಳಿಬೈಲ್ ಕ್ರೀಡಾಂಗಣದಲ್ಲಿ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಯ ಸಭೆಯಲ್ಲಿ ಭಾಗವಹಿಸಿ ಇವರು ಮಾತನಾಡಿದರು. ಈ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, ಈ ಕ್ರೀಡಾಂಗಣದಲ್ಲಿ ತಾವುಗಳೂ ಸೈಕಲ್ ಮೂಲಕ ಬಂದು ಕ್ರಿಕೆಟ್ ಆಡುತ್ತಿದ್ದ ಆ ಸಮಯದ ಮೆಲುಕುಹಾಕಿದರು.
ಕುಮಟಾ ವಲಯ ಅರಣ್ಯಾಧಿಕಾರಿ ಎಸ್. ಟಿ. ಪಟಗಾರ ದೀಪ ಬೆಳಗಿ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು. ಶಾಸಕರಾಗಿರುವ ದಿನಕರ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗೋಳಿಬೈಲ್ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಬಗ್ಗೆ ಸ್ಪೋರ್ಟ್ಸ್ ಕ್ಲಬ್ ನವರು ಶಾಸಕರಿಗೆ ಮನವಿ ಮಾಡಿದರು.
ಶಾಸಕರು ಮಾತನಾಡಿ ನಮ್ಮ ತಾಲೂಕಿನಲ್ಲಿರುವ ವಿಶಾಲ ಕ್ರೀಡಾಂಗಣಗಳಲ್ಲಿ ಗೋಳಿಬೈಲ್ ಕ್ರೀಡಾಂಗಣವೂ ಒಂದು. ಕ್ರಿಕೆಟ್ ಪಂದ್ಯಾವಳಿ ನಡೆಸಲು ಬೇಕಾದ ಅತ್ಯುತ್ತಮ ಪರಿಸರ ಹಾಗೂ ಸ್ಥಳಾವಕಾಶ ಇಲ್ಲಿದ್ದು ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಸಂಘಟನೆ ಮಾಡಿದ್ದೀರಿ. ಮೂರೂರು ಕಲ್ಲಬ್ಬೆ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ಐದು ವರ್ಷಗಳಲ್ಲಿ ಸರ್ಕಾರದಿಂದ ಅತಿಹೆಚ್ಚು ಅನುದಾನ ಒದಗಿಸಿದ್ದೇನೆ. ಮುಂದೆಯೂಕೂಡ ನಿಮ್ಮೆಲ್ಲರ ಜೊತೆಗೆ ನಿಂತು, ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಮಟಾ ಪಿ. ಎಲ್. ಡಿ. ಬ್ಯಾಂಕ್ ಅಧ್ಯಕ್ಷ ಭುವನ್ ಭಾಗವತ, ಕರ್ನಾಟಕ ಬ್ಯಾಂಕ್ ಮೂರೂರು ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ, ಮೂರೂರು ಗ್ರಾಮಪಂಚಾಯತ್ ಸದಸ್ಯರುಗಳಾದ ಆರ್. ವಿ. ಹೆಗಡೆ ಮತ್ತು ಹರ್ಷ ಹೆಗಡೆ, ಕಲ್ಲಬ್ಬೆ ಗ್ರಾಮಪಂಚಾಯತ್ ಅಧ್ಯಕ್ಷ ಗಿರಿಯಾ ಗೌಡ ಹಾಗೂ ಸದಸ್ಯರುಗಳಾದ ಸುಬ್ರಹ್ಮಣ್ಯ ಹೆಗಡೆ ಮತ್ತು ರವಿ ಹೆಗಡೆ ಮತ್ತಿತರರು ಇದ್ದರು.