ಕುಮಟಾ : ಮೊಟ್ಟಮೊದಲ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಫೇ. 11 ಹಾಗೂ 12 ರಂದು ಎರಡು ದಿನಗಳ ಕಾಲ ಉಡುಪಿಯ ಉಡುಪಿಯ ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಬಗ್ಗೆ ವಿವರ ನೀಡುವ ಕುರಿತಾಗಿ ಹಾಗೂ ಉತ್ತರಕನ್ನಡಿಗರೂ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವಂತೆ ವಿನಂತಿಸುವ ಕುರಿತಾಗಿ, ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಕಾರ್ಯಾಧ್ಯಕ್ಷರು ಹಾಗೂ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರೂ ಆದ ಡಾ. ಜಿ.ಎಲ್ ಹೆಗಡೆಯವರು ಪತ್ರಿಕಾಗೋಷ್ಠಿ ನಡೆಸಿದರು.
ರಾಜ್ಯದ ಹೆಮ್ಮೆಯ ಕಲೆಯಾದ ಯಕ್ಷಗಾನದ ಕುರಿತಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತದ ಸಹಯೋಗದಲ್ಲಿ “ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ” ಹಮ್ಮಿಕೊಳ್ಳಲಾಗಿದೆ. ಯಕ್ಷಗಾನ ಸಮ್ಮೇಳನ ಎಂದರೆ ಅದು ಕನ್ನಡದ ಸಮ್ಮೇಳನ ಎಂದೇ ಅರ್ಥ, ಯಕ್ಷಗಾನ ಕೇವಲ ಕರಾವಳಿಯ ಕೆಲೆಯಲ್ಲ, ಕರ್ನಾಟಕದ ಕಲೆ ಇದು. ಶುದ್ಧ ಕನ್ನಡ ಪದ ಬಳಕೆ ಮಾಡುವ ಕಲೆ ಎಂದರೆ ಯಕ್ಷಗಾನ ಎಂದ ಅವರು. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸಬೇಕೆಂಬ ಯಕ್ಷಗಾನಾಸಕ್ತರ ಕೋರಿಕೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ 2022-23ನೇ ಸರ್ಕಾರವು ಆಯವ್ಯಯದಲ್ಲಿ ಉಡುಪಿಯಲ್ಲಿ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸುವುದಾಗಿ ಘೋಷಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರೂ.2.00 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದರು.
ಈ ಸಮ್ಮೇಳನ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ಸರ್ಕಾರ ರಚಿಸಿರುವ ಸಮಗ್ರ ಯಕ್ಷಗಾನ ಸಮ್ಮೇಳನ ಸಲಹಾ ಸಮಿತಿಯ ಸಲಹೆಯಂತೆ ಕಾರ್ಯಕ್ರಮ ಸಂಯೋಜನೆಗೊಂಡಿದೆ. ಪ್ರಥಮ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕರಾಗಿ ಯಕ್ಷಗಾನ ಕ್ಷೇತ್ರದ ಹಿರಿಯ ವಿದ್ವಾಂಸರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಪ್ರಭಾಕರ ಜೋಷಿ ಇವರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು. ಉಡುಪಿಯ ಶಾಸಕ ರಘುಪತಿ ಭಟ್ಟರು ಮುತುವರ್ಜಿಯಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ೫ ಮೇಳಗಳ ಅಧ್ಯಕ್ಷರಾದ ಕಿಶನ್ ಹೆಗಡೆ ಜೊತೆಗೆ ಇದ್ದಾರೆ ಎಂದರು.
ಇದು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿಲ್ಲ. ದುಬೈ ನಿಂದ ಕಲಾ ತಂಡಗಳು ಬರುತ್ತಿದೆ. ಯಕ್ಷಗಾನದ ಎಲ್ಲಾ ವಿಧವನ್ನು ಪರಿಚಯಿಸುವ ಪ್ರಕ್ರಿಯೆ ಈ ಸಮ್ಮೇಳನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
75 ಜನ ಸಾಧಕರನ್ನು ಸನ್ಮಾನಿಸಲಾಗುವುದು. 200 ಜನ ಕೀರ್ತಿಶೇಷ ಕಲಾವಿದರ ಭಾವಚಿತ್ರದ ಕಿರು ಪರಿಚಯದೊಂದಿಗೆ ಪ್ರದರ್ಶನ ಮಾಡಲಾಗುವುದು. ಸಮ್ಮೇಳನದಲ್ಲಿ ಹೊರದೇಶ, ಹೊರ ರಾಜ್ಯದ ತಂಡಗಳು ಸೇರಿದಂತೆ ಒಟ್ಟು 27 ಯಕ್ಷಗಾನ ಕಲಾತಂಡಗಳು ಪ್ರದರ್ಶನ ನೀಡಲಿದೆ. ಗೊಂಬೆಯಾಟ, ತಾಳಮದ್ದಲೆಗಳು, ತುಳು ಯಕ್ಷಗಾನ ಪ್ರದರ್ಶನವು ಸೇರಿರಲಿದೆ. ಯಕ್ಷ ಗಣಪತಿ ಮೂರ್ತಿ, ಯಕ್ಷ ಚೌಕಿ, ದೀಪಸ್ಥಾಪನೆ, ಪುಸ್ತಕ ಪ್ರಕಟಣೆ, ಸ್ಮರಣ ಸಂಚಿಕೆ ಮುಂತಾದವುಗಳ ಸಿದ್ಧತೆ ನಡೆಯುತ್ತಿದೆ. ವಿಚಾರಗೋಷ್ಠಿಗಳು ಪ್ರದರ್ಶನಗಳು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮಗಳ ಸಿದ್ಧತೆ ನಡೆದಿದೆ ಎಂದು ವಿವರಿಸಿದರು.
ಸುಮಾರು 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಚೌಕಿಯ ಮನೆ ಮಾಡಿ ಅದರಲ್ಲಿ ತೆಂಕು ಬಡಗಿನ ಯಕ್ಷಗಾನ ಪ್ರತಿಮೆ ಮಾಡಿ, ಯಕ್ಷಗಾನ ನಡೆಸುವ ಸ್ಥಳದಿಂದ ದೀಪ ತರುವ ಪ್ರಯತ್ನ, ಪ್ರಸಾದನ, ಕಸೆ ಸೀರೆ ತಯಾರಿ ಪ್ರದರ್ಶನ ಇರಲಿದ್ದು. ಯಕ್ಷಗಾನ ವೇಷಭೂಷಣ ತೊಟ್ಟು ಫೋಟೋ ತೆಗೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಧಾನ ವೇದಿಕೆಗೆ ಶಂಕರನಾರಾಯಣ ಸಾಮಗರ ಹೆಸರಿಡಲಾಗಿದೆ, ೨ ನೇ ವೇದಿಕೆಗೆ ಕೆರೆಮೆನೆ ಶಿವರಾಮ ಹೆಗಡೆ, ೩ ನೇ ವೇದಿಕೆಗೆ ಅಳಿಕೆ ರಾಮರಾಯರ ಹೆಸರಿಡಲಾಗಿದೆ ಎಂದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾರ್ಯಕ್ರಮದ ಉದ್ಘಾಟನೆಗೆ ವಿನಂತಿಸಲಾಗಿದೆ. ಚಂದ್ರಶೇಖರ ಕಂಬಾರರು ದಿಕ್ಸೂಚಿ ಮಾತನ್ನಾಡಲಿದ್ದಾರೆ ಎಂದರು. ಎಡನೀರು ಶ್ರೀಗಳು ಸಮಾರೋಪ ಸಮಾರಂಭದಲ್ಲಿ ದಿವ್ಯ ಉಪಸ್ಥಿತಿ ನೀಡಲಿದ್ದಾರೆ ಎಂದರು.
ಬಣ್ಣ ಹಚ್ಚುವ, ಟೆಂಟ್ ಕಟ್ಟುವ, ಯಕ್ಷಗಾನಕ್ಕಾಗಿ ಸೇವೆ ಸಲ್ಲಿಸಿದ ಎಲೆಮರೆಯ ಕಾಯಿಯಂತಿರುವ ೭೫ ಜನರನ್ನು ಸನ್ಮಾನಿಸಲಾಗುವುದು ಎಂದರು. ಒಂದೇ ಸಮ್ಮೇಳನದಲ್ಲಿ ಎಲ್ಲರನ್ನೂ ಗುರುತಿಸಲು ಸಾಧ್ಯವಾಗುವುದಿಲ್ಲ. ಮುಂದೆ ಈ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದವರು ಕಾರ್ಯಾಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಸಂತಸದ ವಿಚಾರ ಎಂದರು.
ಉತ್ತರ ಕನ್ನಡ ಯಕ್ಷಗಾನಕ್ಕೆ ಹೆಸರುವಾಸಿಯಾದರು ಸಾಮಾಜಿಕವಾಗಿ ತೊಡಗಿಸಿಕೊಳ್ಳುವಿಕೆ ಇನ್ನು ಹೆಚ್ಚು ಬೇಕು. ಗುಂಡಬಾಳ ಮೇಳದಂತಹ ವ್ಯವಸ್ಥೆ ಎಲ್ಲಿಯೂ ಇಲ್ಲ. ಆರು ತಿಂಗಳ ನಿರಂತರ ಯಕ್ಷಗಾನ ನಡೆಯುವುದು ನಮ್ಮ ನೆಲದಲ್ಲಿ ಎಂದ ಅವರು, ಉತ್ತರಕನ್ನಡಕ್ಕೊಂದು ಯಕ್ಷ ರಂಗಾಯಣದ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಮಂಜುನಾಥ್ ಭಟ್ಟ ಸುವರ್ಣಗದ್ದೆ, ಕಾರ್ಯದರ್ಶಿಗಳಾದ ವಸಂತ ಭಟ್ಟ ಹಾಜರಿದ್ದರು.