ಕುಮಟಾ : ಹವ್ಯಕ ವಿದ್ಯಾವರ್ಧಕ ಸಂಘ ಕುಮಟಾದಿಂದ ಸಂಯೋಜನೆಗೊಂಡಿದ್ದ ಕುಮಟಾ ತಾಲೂಕಾ 28 ನೇ ಹವ್ಯಕ ಸಮ್ಮೇಳನ ತಾಲೂಕಿನ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ವಿಚಾರ ಸಂಕಿರಣ, ಸನ್ಮಾನ ಹಾಗೂ ಹವ್ಯಕ ಮಹಿಳೆಯರಿಗಾಗಿ ನಡೆದ ವಿಶೇಷ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಗಮನ ಸೆಳೆಯಿತು.
ಬ್ರಾಹ್ಮಣ್ಯದ ಆಚರಣೆಯ ಮಹತ್ವದ ಬಗ್ಗೆ ಗೋಕರ್ಣದ ಡಾ. ಗಣೇಶ ಜೋಗಳೇಕರ, ಅಡಿಕೆ ಕೃಷಿಯ ಬಗ್ಗೆ ಸಿ.ಪಿ.ಸಿ.ಆರ್.ಐ ಕಾಸರಕೋಡಿನ ವಿಜ್ಞಾನಿ ಡಾ. ರವಿ ಭಟ್ಟ ಹಾಗೂ ಹವ್ಯಕ ಸಂಪ್ರದಾಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿವೇಕಾನಂದ ಕಾಲೇಜ ಪುತ್ತೂರಿನ ಉಪನ್ಯಾಸಕಿ ಶ್ರೀಮತಿ ವಿದ್ಯಾ ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ನಾರಾಯಣ ಭಾಗ್ವತ ಹಂದಿಗೋಣ, ಏಷಿಯಾ ಬುಕ್ ಆಫ್ ರೆಕಾರ್ಡ ಭೂಷಿತ ಶಿವಮೂರ್ತಿ ಭಟ್ಟ ಮೂರೂರು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾದ ಡಾ. ಮಹೇಳ ಅಡ್ಕೊಳಿ ಅವರು ಅಭೆಯನ್ನು ಉದ್ದೇಶಿಸಿ ಮಾತನಾಡಿ, ಹವ್ಯಕ ಸಮಾಜ ಪ್ರಬುದ್ಧವಾದ ಸಮಾಜವಾಗಿದ್ದು, ಸಮಾಜದ ಸಂಘಟನೆಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಅಗತ್ಯ ವಿಚಾರಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹಾಗೂ ಈ ಕಾರ್ಯಕ್ರಮದ ಸಂದರ್ಭದಲ್ಲಿ ಜನರ ಭಾಗವಹಿಸುವಿಕೆ ಕಂಡು ಸಂತಸ ಎನಿಸಿದೆ ಎಂದರು. ಹಳೆಯ ಸಾಂಪ್ರದಾಯಿಕ ಹಾಡು ಹೇಳುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕಬ್ಬಿನ ಹಾಲಿನ ಸಿಹಿ ತಿಂಡಿ ಸ್ಪರ್ಧೆ, ಚೌತಿ ಹಬ್ಬದ ವಡೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು.
ಹವ್ಯಕ ವಿದ್ಯಾವರ್ಧಕ ಸಂಘ, ಕುಮಟಾದ ಅಧ್ಯಕ್ಷರಾದ ಡಾ. ಶ್ರೀಕಾಂತ ಪಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ ಭಟ್ಟ ಸಭೆಯಲ್ಲಿ ಹಾಜರಿದ್ದರು.