ಹೊನ್ನಾವರ: ಕಾಸರಕೋಡ ಟೊಂಕ ಕಡಲತೀರದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 11ಕ್ಕೂ ಹೆಚ್ಚು ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳು ಸಾವಿರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಟ್ಟಿದ್ದು, ಮೊಟ್ಟೆಗಳನ್ನು ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಜತನದಿಂದ ಸಂರಕ್ಷಣೆ ಮಾಡುತ್ತಿದ್ದಾರೆ.
ಕಡಲತೀರದಲ್ಲಿ ಕಡಲಾಮೆಗಳ ಹೆಜ್ಜೆ ಗುರುತುಗಳು ಸೊಗಸಾಗಿ ಮೂಡಿಬಂದಿದ್ದು ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯರ ಸಹಕಾರದಿಂದ ಅರಣ್ಯ ಸಿಬ್ಬಂದಿ ಕಡಲತೀರದಲ್ಲಿ ಗಸ್ತು ತಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಡಲಾಮೆಗಳ ಹೆಜ್ಜೆ ಗುರುತುಗಳನ್ನು ಆಧರಿಸಿ ಈ ವರೆಗೆ ಓಟ್ಟೂ ಹನ್ನೊಂದು ಗೂಡುಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಅದೇ ಸ್ಥಳದಲ್ಲಿ ಮರಿಗಳನ್ನು ಹಾಕುವವರೆಗೆ ಸಂರಕ್ಷಣೆ ಮಾಡುವ ರಕ್ಷಣಾತ್ಮಕ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ.
ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಉಪವಲಯಾಧಿಕಾರಿ ಗೌಸ, ಸಹಾಯಕ ಸಿಬ್ಬಂದಿ ವಿನಾಯಕ ಭಟ್ಟ, ಮತ್ತು ಸೋಮಯ್ಯ, ಜೈನ ಜಟಗೇಶ್ವರ ಸಂಘದ ಸದಸ್ಯರು ತೊಡಗಿಸಿಕೊಂಡಿದ್ದಾರೆ. ಕಡಲತೀರದಲ್ಲಿ ಹಗಲಿನಲ್ಲಿಯೂ ಮೊಟ್ಟೆ ಇಟ್ಟಿರುವದು ಕಡಲಾಮೆಗಳು ಸಂಶೋಧನೆಯ ದೃಷ್ಠಿಯಿಂದ ಮಹತ್ವ ಪಡೆದುಕೊಂಡಿದ್ದು, ಸ್ಥಳಕ್ಕೆ ಕಡಲ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವರೆಗೆ ಓರಿಸ್ಸಾ ಕಡಲತೀರ ಮಾತ್ರ ರಿಡ್ಲೆ ಜಾತಿಯ ನೂರಾರು ಕಡಲಾಮೆಗಳು ಹಗಲಿನ ಸಮಯದಲ್ಲಿ ಮೊಟ್ಟೆ ಇಡುವ ಪ್ರದೇಶವೆಂದು ಗುರುತಿಸಲ್ಪಟ್ಟಿದೆ.
ಈ ಬಾರಿ ಕಾಸರಕೋಡ ಟೊಂಕದ ಕಡಲತೀರ ಮತ್ತು ಕಾರವಾರದ ಕಡಲ ತೀರದ ಹಲವೆಡೆ ಹಗಲಿನಲ್ಲಿಯೂ ಕಡಲಾಮೆಗಳು ಮೊಟ್ಟೆ ಇಟ್ಟಿರುವ ವರದಿ ಬಂದಿದ್ದು ಹವಾಮಾನದ ಬದಲಾವಣೆ ಮತ್ತು ಬೆಳಕು ಮೀನುಗಾರಿಕೆಯ ಪ್ರಭಾವದ ಸಾಧ್ಯತೆ ಬಗ್ಗೆ ಸಂಶೋದನೆ ನಡೆದ ನಂತರ ನಿಖರವಾಗಿ ಹೇಳಲು ಸಾಧ್ಯ ಎಂದು ಕಡಲ ವಿಜ್ಞಾನಿಗಳು ಹೇಳಿದ್ದಾರೆ.