ಶಿರಸಿ: ಯಕ್ಷಗಾನ ತಾಳಮದ್ದಲೆ ಅರ್ಥದಾರಿಯಾಗಿ ನಾಡಿನಲ್ಲಿ ಹೆಸರು ಮಾಡಿದ್ದ ಕೆರೇಕೈ ಕೃಷ್ಣ ಭಟ್ಟ ಅವರ ನೆನಪಿನಲ್ಲಿ ಈ ಬಾರಿ ಇಬ್ಬರಿಗೆ ಕೃಷ್ಣ ಸ್ಮರಣ ಪುರಸ್ಕಾರ ಪ್ರಕಟಿಸಲಾಗಿದೆ.
ಬಡಗಿನ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಹಾಗೂ ಹೆಸರಾಂತ ಅರ್ಥಧಾರಿ ಮೋಹನ ಭಾಸ್ಕರ ಹೆಗಡೆ ಅವರಿಗೆ ಕೃಷ್ಣ ಭಟ್ಟ ಅವರ ನೆನಪಿನಲ್ಲಿ ಈ ಪುರಸ್ಕಾರ ಪ್ರಕಟಿಸುತ್ತಿದ್ದೇವೆ ಎಂದು ಕೃಷ್ಣ ಸ್ಮರಣದ ಸಂಚಾಲಕ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ತಿಳಿಸಿದ್ದಾರೆ.
ಕಳೆದ ನಾಲ್ಕುವರೆ ದಶಕಗಳಿಂದ ಯಕ್ಷಗಾನದ ಭಾಗವತರಾಗಿ ಸೇವೆ ಸಲ್ಲಿಸಿರುವ ಕೊಳಗಿ ಅವರು ಪೌರಾಣಿಕ ಆವರಣವನ್ನು ತಮ್ಮ ಮಂಗಲ ಸ್ವರದಲ್ಲಿ ಕಟ್ಟಿಕೊಡುತ್ತಿದ್ದಾರೆ. ಸಿದ್ದಾಪುರ ತಾಲೂಕಿನ ಕೊಳಗಿಯ ಕೇಶವ ಹೆಗಡೆ ಯಕ್ಷಗಾನದ ಸಾಂಪ್ರದಾಯಿಕ ಭಾಗವತರೆಂದೇ ಪ್ರಸಿದ್ದರಾದವರು.
ಮೋಹನ ಭಾಸ್ಕರ ಹೆಗಡೆ ಅವರು ತಾಳಮದ್ದಲೆಯ ಅರ್ಥಧಾರಿಯಾಗಿ ಪರಿಚಿತರು. ಸುಮಾರು ೨೫ ವರ್ಷಗಳ ತನಕ ಯಕ್ಷಗಾನ ಹಾಗೂ ಶಾಸ್ತ್ರೀಯ ಸಂಗೀತನ್ನು ಒಂದೇ ವೇದಿಕೆಯಲ್ಲಿ ತರುವ ಸಾಹಸ ಮಾಡಿದವರು. ಮೂಲತಃ ಕರ್ಕಿಯವರಾದ ಅವರು ಪ್ರಸ್ತುತ ಸೆಲ್ಕೋ ಸಂಸ್ಥೆಯ ದೇಶ ಮಟ್ಟದ ಉನ್ನತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಲೇಖನಗಳನ್ನು ಬರೆಯುವ ಮೂಲಕ ಕೂಡ ಮೋಹನ ಹೆಗಡೆ ಅವರು ಪರಿಚಿತರು. ಇವರಿಬ್ಬರಿಗೆ ಪ್ರಶಸ್ತಿ ಪ್ರಕಟಿಸುವದು ನಮಗೂ ಹೆಮ್ಮೆ ಎಂದು ಕೃಷ್ಣ ಸ್ಮರಣದ ಪ್ರಕಟನೆಯಲ್ಲಿ ಉಮಾಕಾಂತ ಭಟ್ಟ ಅವರು ತಿಳಿಸಿದ್ದಾರೆ.