ಗೋಕರ್ಣ: ಕುಡ್ಲೆ ಬೀಚ್ ಗೋಗರ್ಭದ ಗುಹೆಯೊಂದರಲ್ಲಿ ಸ್ವಾಮಿ ವೇಷದಲ್ಲಿ ಉಳಿದು, ಆಯುರ್ವೇದ ಔಷಧಿಯ ಮೂಲಕ ಚರ್ಮರೋಗ ಇನ್ನಿತರ ಕಾಯಿಲೆಗಳನ್ನು ಗುಣಪಡಿಸುವುದಾಗಿ ಹೇಳಿ ಅಲ್ಲಿಗೆ ಬರುವ ಹೆಂಗಸರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಮುಂಬೈ ಮೂಲದ ವ್ಯಕ್ತಿ ಕೊನೆಗೂ ಪೊಲೀಸ್ ತಾಕೀತಿಗೆ ಹೆದರಿ ಸ್ಥಳದಿಂದ ಕಾಲ್ಕಿತ್ತ ಪ್ರಸಂಗ ನಡೆದಿದೆ.
ಕಳೆದ ಒಂದೆರಡು ತಿಂಗಳಿಂದ, ತಾನು ಸ್ವಾಮಿ ಎಂಬಂತೆ ಖಾವಿ ತೊಟ್ಟು, ಗೋಕರ್ಣಕ್ಕೆ ಪ್ರವಾಸಕ್ಕೆ ಎಂದು ಬರುವ ಮಹಿಳೆಯರನ್ನು ಹಾಗೂ ಹುಡುಗಿಯರನ್ನು ಗುಹೆಯೊಳಗೆ ಬರಮಾಡಿಕೊಂಡು ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ವಿದೇಶಿ ಮಹಿಳೆಯೊಬ್ಬಳು ತನ್ನ ಫೇಸ್ ಬುಕ್ ಖಾತೆಯಲ್ಲಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸರು ಸ್ಥಳಕ್ಕೆ ತೆರಳಿ ಆತನಿಗೆ ಹೊರಹೋಗುವಂತೆ ತಿಳಿಸಿದ್ದರು. ಆದರೂ ಅಲ್ಲಿಯೇ ನೆಲೆಸಿ ತನ್ನ ರಂಗಿನಾಟ ಮುಂದುವರೆಸಿದ್ದ. ಪೊಲೀಸರು ಮತ್ತೆ ಅಲ್ಲಿಗೆ ತೆರಳಿ ಬಿಸಿ ಮುಟ್ಟಿಸಿ ಇಲ್ಲಿಂದ ತೆರಳದೇ ಇದ್ದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಕ್ಕೆ ತಿಳಿಸಿದಾಗ ಸ್ಥಳದಿಂದ ಪರಾರಿಯಾಗಿದ್ದಾನೆ.