ಬೆಂಗಳೂರು: ಖ್ಯಾತ ಪೇಂಟಿಂಗ್‌ ಕಲಾವಿದ ಬಿ.ಕೆ.ಎಸ್‌. ವರ್ಮ ಹೃದಯಾಘಾತದಿಂದ ಇಂದು, ಸೋಮವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಶಾಂತ ವರ್ಮ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರನ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿದ್ದವು. ಪರಿಸರ ಆಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರವನ್ನು ರಚಿಸುತ್ತಿದ್ದರು.

ರಾಜಾ ರವಿವರ್ಮ ಅವರ ಕಾಲಕೃತಿಗಳನ್ನು ಮೈಸೂರಿನ ಅರಮನೆಯಲ್ಲಿ ವೀಕ್ಷಿಸುತ್ತಿದ್ದ ವರ್ಮ ಅವರು ವಿಪರೀತ ಪ್ರಭಾವಿತರಾಗಿ, ತಮ್ಮ ಮೂಲ ಹೆಸರಾದ ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ ಜೊತೆ ವರ್ಮ ಎಂಬ ಹೆಸರನ್ನೂ ಸೇರಿಸಿಕೊಂಡಿದ್ದರು. 6ನೇ ವಯಸ್ಸಿಗೆ ಹವ್ಯಾಸವಾಗಿ ರೇಖಾಚಿತ್ರ ಪ್ರಾರಂಭಿಸಿದ್ದ ಅವರು, ನಿರಂತರವಾಗಿ ಆರೇಳು ದಶಕಗಳ ಕಾಲ ಚಿತ್ರಕಲೆಯಲ್ಲೇ ತೊಡಗಿಸಿಕೊಂಡಿದ್ದರು. ತಂದೆ ಕೃಷ್ಣಮಾಚಾರ್ಯರು ಸಂಗೀತಗಾರರಾಗಿದ್ದರು, ತಾಯಿ ಜಯಲಕ್ಷ್ಮೀ ಚಿತ್ರಕಲಾವಿದರು.

RELATED ARTICLES  ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಯಶಸ್ವೀ ಸಮಾರೋಪ

ಮೊದಲು ತಮ್ಮ ಬೆರಳುಗಳನ್ನೇ ಬಳಸಿ ಚಿತ್ತಾರ ಸೃಷ್ಟಿಸುತ್ತಿದ್ದ ಇವರು ಎಂಬೋಸಿಂಗ್, ಥ್ರೆಡ್ ಪೇಂಟಿಂಗ್ ಮೂಲಕ ಕಲಾಕೃತಿಗಳನ್ನು ರಚಿಸಲು ಆರಂಭಿಸಿದರು. ಕೆಲವೇ ನಿಮಿಷಗಳಲ್ಲಿ ಅತ್ಯುತ್ತಮವಾದ ಕಲಾಕೃತಿ ಸೃಷ್ಟಿಸಿಬಲ್ಲವರಾಗಿದ್ದ ಡಾ.ವರ್ಮಾ ಅವರು ಅವರು ಬಿಡಿಸಿದ ಓಂಗಣೇಶ ಚಿತ್ತಾರ ಜನರ ಆಸಕ್ತಿಯನ್ನು ಕೆರಳಿಸಿತು. ತಾಯಿ ಭುವನೇಶ್ವರಿ, ವೃಕ್ಷದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಹಲವು ಚಿತ್ರಗಳು ಇವರಿಗೆ ಹೆಚ್ಚೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಅನೇಕ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಅವರು ಚಿತ್ರ ಕಲಾವಿದರನ್ನು ತಯಾರಿ ಮಾಡಿದ್ದರು.

RELATED ARTICLES  ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭ.


ಸಿನಿ ತಾರೆಗಳಾದ ಡಾ.ರಾಜ್‌ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಅಂತಾರಾಷ್ಟ್ರಿಯ ಸುಪ್ರಸಿದ್ದ ಕಲಾವಿದರಾದ ಡಾ.ರೋರಿಕ್-ದೇವಿಕಾರಾಣಿ ದಂಪತಿ ಹಾಗೂ ಹಿಂದೂ ದೇವಾನುದೇವತೆಗಳ ಪೇಂಟಿಂಗ್‌ಗಳು ಅದ್ಭುತವೆನಿಸಿಕೊಂಡಿವೆ.

ಬಿಕೆಸ್ ವರ್ಮ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಲಲಿತಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. ಬೆಂಗಳೂರು ವಿವಿ ಯಿಂದ 2011ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.