ಕುಮಟಾ : ಎಚ್.ಡಿ ಕುಮಾರಸ್ವಾಮಿಯವರ ಸಿ.ಡಿ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡರುಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸ್ಟೇ ತಂದುಕೊಳ್ಳುವಂಥ ನನ್ನ ಸಿ.ಡಿಗಳು ಯಾವುದೂ ಇರಲಿಕ್ಕಿಲ್ಲ. ಇದ್ದರೆ ಬಡವರ ಕಣ್ಣೀರು ಒರೆಸಿರುವ ಸಿಡಿ ಇದ್ದರೆ ಇರಬಹುದು ಎಂದಿದ್ದಾರೆ.
ಕುಮಟಾದಲ್ಲಿ ಪಂಚರತ್ನ ಯಾತ್ರೆಯ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಬಳಿ ನನ್ನ ಯಾವ ಸಿಡಿ ಇದೆಯಂತೆ? ಯಾವ ಸಿ.ಡಿ ಬಿಡುಗಡೆ ಮಾಡ್ತಾರೆ? ಅವರಲ್ಲಿ ಸಿಡಿಯಿದ್ದರೆ ಬಿಡುಗಡೆ ಮಾಡಲಿ. ನನ್ನ ಸಿ.ಡಿ ಬಿಡುಗಡೆ ಮಾಡೋದಾದ್ರೆ ರಾಜ್ಯದ ಬಡವರು ಕಣ್ಣೀರು ಹಾಕಿ ಮಾತನಾಡಿದ, ನಾನು ಸಹಾಯ ಮಾಡಿದ ಸಿ.ಡಿ ಬಿಡುಗಡೆ ಮಾಡಬೇಕಷ್ಟೇ. ಅವರಂತೆ ಸ್ಟೇ ತರುವಂತಹ ಯಾವುದೇ ಸಿಡಿಗಳಿಲ್ಲ. ನನ್ನ ಸಿ.ಡಿ ಬಿಡುಗಡೆ ಮಾಡಲು ಯಾವುದೇ ಪ್ರಕರಣಗಳಿಲ್ಲ ಎಂದಿದ್ದಾರೆ. ಈ ಮೂಲಕ ಬಿಜೆಪಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ನನ್ನ ಹೇಳಿಕೆಗಳನ್ನು ಕೇವಲ ಗೊಂದಲವಾಗಿ ಬಿಂಬಿಸಲಾಗುತ್ತಿದೆ ಆದರೆ ನನ್ನ ಪ್ರಶ್ನೆಗೆ ಯಾವ ಬಿಜೆಪಿ ನಾಯಕರು ಉತ್ತರ ಕೊಟ್ಟಿಲ್ಲ ಎಂದ ಅವರು, ಟ್ವೀಟ್ ಮಾಡುವ ಮೂಲಕ ಇದರ ಬಗ್ಗೆ ಜನರಿಗೆ ತಿಳಿಸುವೆ ಎಂದರು. ನಾನು ಯಾವುದೇ ಜಾತಿ ಮತ ಭೇದವಿಲ್ಲದೆ ಯಾರಿಗೂ ಅನ್ಯಾಯ ಮಾಡದೆ ಸರಕಾರ ನಡೆಸಿದ್ದೇನೆ ಎಂದರು. ಮಹಾಲಯ ಅಮವಾಸ್ಯೆ ನಂತರದಲ್ಲಿ ಕೆಲವು ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದರು. ದೈವಾನುಗ್ರಹ ಆಗಿದೆ, ಜೆಡಿಎಸ್ ಗೆ ಜನ ಬೆಂಬಲ ಸಿಗಲಿದೆ ಎಂದರು.
ತೆನೆಯೇ ಏಳದಿದ್ದರೆ ಕೈ ಇದು ಏನು ಪ್ರಯೋಜನ? ಕೊಡುವ ಕೆಲಸ ಕೈಯಿಂದ ಆಗಬೇಕಿತ್ತು, ಆದರೆ ಆ ಕೆಲಸ ಕೈಯಿಂದ ಆಗುತ್ತಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಚಿಹ್ನೆಯಾದ ಕೈಯಲ್ಲಿ ಗೆರೆ ಬದಲಾವಣೆಗೆ ಮುಂದಾಗಿದೆ ಎಂದು ಅವರು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ನಾನು ಉತ್ತರ ಕನ್ನಡಕ್ಕೆ ಬಂದಿದ್ದೆ ಅರಣ್ಯ ಅತಿಕ್ರಮಣದಾರರ ಸಮಸ್ಯೆ, ರೈತರ ಸಮಸ್ಯೆ ಮೀನುಗಾರರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗಮನಕ್ಕಿದೆ. ಇದೆಲ್ಲದಕ್ಕೂ ಪಂಚರತ್ನ ಯೋಜನೆಯಲ್ಲಿ ಉತ್ತರ ಇದೆ ಎಂದು ಅವರು ತಿಳಿಸಿದರು.