ಬೆಂಗಳೂರು: ವರದಕ್ಷಿಣಿ ಕಿರುಕುಳ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಲಾಗಿರುವ ನಟಿ ಅಭಿನಯ ಹಾಗೂ ಸಹೋದರ ಮತ್ತು ತಾಯಿ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಈಗ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಅತ್ತಿಗೆ ಲಕ್ಷ್ಮಿದೇವಿ ಅವರು ದಾಖಲಿಸಿದ್ದ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ವಿಚಾರಣೆ ಮಾಡಿದ ನ್ಯಾಯಾಲಯ ನಟಿ ಅಭಿನಯ, ಅವರ ತಾಯಿ ಹಾಗೂ ಸಹೋದರನಿಗೆ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಅಭಿನಯ, ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜು ತಲೆಮರೆಸಿಕೊಂಡಿರುವ ಕಾರಣ ಪೊಲೀಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ ಹಾಗೂ ಅವರ ಬಗ್ಗೆ ಸುಳಿವು ಸಿಕ್ಕರೆ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಭಿನಯ ಅಣ್ಣನ ಪತ್ನಿ ಲಕ್ಷ್ಮಿದೇವಿ ಈ ಹಿಂದೆ ದೂರು ನೀಡಿದ್ದರು. ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತಮಗೆ ವರದಕ್ಷಿಣಿ ಕಿರುಕುಳ ನೀಡಲಾಗಿದೆ ಮತ್ತು ಕೌಟುಂಬಿಕ ದೌರ್ಜನ್ಯ ನಡೆಸಲಾಗಿದೆ ಎಂದು ಲಕ್ಷ್ಮಿದೇವಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಅವರಿಗೆ 2 ವರ್ಷ ಶಿಕ್ಷೆ ನೀಡಲಾಗಿತ್ತು.
ಅಭಿನಯಾ ಅವರ ಅತ್ತಿಗೆ ಲಕ್ಷ್ಮಿದೇವಿ ಅವರು 2002ರಲ್ಲಿಯೇ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದರು. 1998ರಲ್ಲಿ ಅಭಿನಯಾ ಸಹೋದರ ಶ್ರೀನಿವಾಸ್ ಜೊತೆ ಲಕ್ಷ್ಮಿದೇವಿ ವಿವಾಹ ನೆರವೇರಿತ್ತು. ಮದುವೆ ಬಳಿಕ ಶ್ರೀನಿವಾಸ್ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಂದ್ರಾ ಲೇಔಟ್ನಲ್ಲಿ ಲಕ್ಷ್ಮಿದೇವಿ ದೂರು ದಾಖಲಿಸಿದ್ದರು.
2022ರ ಡಿಸೆಂಬರ್ನಲ್ಲಿ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ ಅಭಿನಯ, ಅವರ ತಾಯಿ ಮತ್ತು ಸಹೋದರನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆ ಬಳಿಕ ಈ ಮೂವರೂ ತಲೆಮರೆಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅಭಿನಯ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಸಿನೆಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಪಡೆದಿದ್ದಾರೆ. ಪೊಲೀಸರು ಈ ಮೂವರನ್ನೂ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಬೇಕಿತ್ತು. ಆದರೆ ಅವರು ಅಷ್ಟರಲ್ಲೇ ತಲೆಮರೆಸಿಕೊಂಡಿದ್ದರು.