ಕಾರವಾರ : ನಗರದ ಸ್ವೀಕಾರ ಕೇಂದ್ರದಿಂದ ಓಡಿ ಹೋಗಿದ್ದ ಯುವತಿಯೋರ್ವಳನ್ನು ಕೊನೆಗೂ ಪತ್ತೆ ಮಾಡಿ ಸ್ವೀಕಾರ ಕೇಂದ್ರಕ್ಕೆ ಪುನಃ ದಾಖಲಿಸಿದ ಘಟನೆ ನಡೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಮಂದಿರ ಕಟ್ಟಡದಲ್ಲಿರುವ ಸ್ವೀಕಾರ ಕೇಂದ್ರದಿಂದ ಶನಿವಾರ ಮಧ್ಯಾಹ್ನ 21 ವರ್ಷದ ಯುವತಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸುತ್ತಮುತ್ತ ಹುಡುಕಾಟ ನಡೆಸಿದ ಸಿಬ್ಬಂದಿ ಮೇಲ್ವಿಚಾರಕಿಗೆ ತಿಳಿಸಿದ್ದು ಅವರು ಪೊಲೀಸರಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದ್ದಾರೆ. ಬಳಿಕ ಯುವತಿಯೂ ಬಸ್ ನಿಲ್ದಾಣದ ಕಡೆ ತೆರಳುತ್ತಿರುವುದನ್ನ ಗಮನಿಸಿದ ಮೆಲ್ವಿಚಾರಕಿ ಆಕೆಯನ್ನು ಹಿಡಿದು ಪೊಲೀಸರ ಸಹಕಾರದಲ್ಲಿ ಪುನಃ ಸ್ವೀಕಾರ ಕೇಂದ್ರಕ್ಕೆ ದಾಖಲಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ ಈಕೆ ಸ್ವೀಕಾರ ಕೇಂದ್ರದ ಟೆರಿಸ್ ಮೇಲಿಂದ ಸೀರೆ ಕಟ್ಟಿ ಅದರ ಮೂಲಕ ಇಳಿದು ಪರಾರಿಯಾಗಿರುವುದು ಗೊತ್ತಾಗಿದೆ.
ಯುವತಿ ಕಳೆದ ಕೆಲ ತಿಂಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದಳು. ಮಾತು ಬಾರದ ತಾನು ಯಾರೆಂಬುದು ತಿಳಿಯದ ಯುವತಿಯನ್ನು ಸ್ವೀಕಾರ ಕೇಂದ್ರದಲ್ಲಿ ಇಡಲಾಗಿತ್ತು. ಆದರೆ ಅವರನ್ನು ಹೊರಗೆ ಬಿಡದ ಕಾರಣ ಈ ರಿತಿ ಮಾಡಿರಬಹುದು. ಸ್ವೀಕಾರ ಕೇಂದ್ರದಲ್ಲಿ 8 ಮಂದಿ ಮಾತ್ರ ಇರುವ ಕಾರಣ ಯಾವುದೇ ತೊಂದರೆ ಕೂಡ ಇಲ್ಲ. ಆದರೆ ಇದೀಗ ಯುವತಿ ಸಿಕ್ಕಿದ್ದು ಪುನಃ ಕರೆದುಕೊಂಡು ಬರಲಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ತಿಳಿಸಿದ್ದಾರೆ.