ಶಿರಸಿ:ಶಹರದ ಒಳ ರಸ್ತೆಗಳನ್ನು ಸುವ್ಯವಸ್ಥಿತವಾಗಿ ಇಡುವುದಕ್ಕೆ ನಗರ, ಸ್ಥಳೀಯ ಸಂಸ್ಥೆಗಳು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ಕೆಲ ತಿಂಗಳ ಹಿಂದೆ ನಗರದೊಳಗಿನ ರಾಜ್ಯ ಹೆದ್ದಾರಿಗಳ ನಿರ್ವಹಿಸುವ ಹೊಣೆಗಾರಿಯೂ ಹೆಗಲಿಗೆ ಏರಿರುವುದು ಸ್ಥಳೀಯ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿದೆ.

ಕಳೆದ ಮೇ ತಿಂಗಳಲ್ಲಿ ಸರಕಾರ ನಗರ ಪರಿಮಿತಿಯಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿಯನ್ನು ನಗರ ಪ್ರಾಧಿಕಾರಗಳ ರಸ್ತೆಗಳೆಂದು ಘೋಷಿಸಿ ಸರಕಾರ ಆದೇಶಿಸಿತ್ತು. ಅದರನ್ವಯ ಈ ವ್ಯಾಪ್ತಿಯ ರಸ್ತೆಗಳು ತಮ್ಮ ಅಧಿನಕ್ಕೆ ವಹಿಸಿಕೊಳ್ಳುವಂತೆ ಜೂನ್‌ದಲ್ಲಿ ಲೋಕೋಪಯೋಗಿ ಇಲಾಖೆ ಸ್ಥಳೀಯ ನಗರಾಡಳಿತಕ್ಕೆ ತಿಳಿಸಿದ್ದವು. ಆಗ ಅದು ಅಷ್ಟೊಂದು ಗಂಭಿರತೆ ಅನಿಸಿರಲಿಲ್ಲ. ಏಕೆಂದರೆ ಮಳೆಗಾಲದ ಆರಂಭವಾಗಿದ್ದರಿಂದ ಹೆದ್ದಾರಿಯ ಯಾವುದೇ ಕೆಲಸದ ಸಂದರ್ಭ ಎದುರಾಗಿರಲಿಲ್ಲ. ಆದರೆ ಇದೀಗ ಮಳೆ ಅವಧಿ ಕೊನೆ ಹಂತಕ್ಕೆ ತಲುಪಿದೆ. ನಗರದ ಒಳ ರಸ್ತೆಗಳ ಅಲ್ಲದೇ ಹೆದ್ದಾರಿಗಳೂ ಹೊಂಡಗಳಿಂದ ಆವೃತವಾಗಿದೆ. ಮುಖ್ಯ ರಸ್ತೆಗಳಾಗಿದ್ದರಿಂದ ಅವುಗಳನ್ನು ತುಂಬಿ ಸರಿಪಡಿಸಬೇಕಾದ ಅಗತ್ಯವಿದೆ. ಆದರೆ ಸರಕಾರದ ಆದೇಶದಂತೆ ಜವಾಬ್ದಾರಿ ಹೊಂದಿರುವ ನಗರಾಡಳಿತದವರು ಆ ಕೆಲಸಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಅನುದಾನ ಕೊರತೆ ಮತ್ತಿತರ ತಾಂತ್ರಿಕ ಕಾರಣಗಳಿಂದ ಇದನ್ನು ನಿರ್ವಹಿಸಲಾಗದ ಅತ್ತ ಬಿಡಲಾಗದ ಸಂದಿಗ್ಧತೆಗೆ ಒಳಗಾಗಿವೆ.

RELATED ARTICLES  ಯಕ್ಷರಂಗದ ಹಿರಿಯ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಇನ್ನಿಲ್ಲ: ಕಳಚಿದ ಮೇರು ಭಾಗವತರ ಪರಂಪರೆಯ ಕೊಂಡಿ.

ಒಳ ರಸ್ತೆಗಳ ಸ್ಥಿತಿಯೇ ಅಧೋಗತಿ :

ನಗರೋತ್ಥಾನ ಮತ್ತಿತರ ಯೋಜನೆ ಜಾರಿಯಾದಾಗಲೂ ಶಹರದ ಹಲವು ಒಳರಸ್ತೆಗಳ ಸ್ಥಿತಿ ಇಂದಿಗೂ ಅಧೋಗತಿಯಲ್ಲಿಯೇ ಇದೆ. ಕೆಲವು ಕಡೆಯಂತೂ ಓಡಾಡುವ ಪರಿಸ್ಥಿತಿಯಿಲ್ಲ. ಅದನ್ನು ನಿರ್ವಹಿಸುವುದಕ್ಕೆ ಹರಸಾಹಸಪಡುತ್ತಿರುವ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ ಜವಾಬ್ದಾರಿ ನಿರ್ವಹಣೆ ಹೇಗೆ ಸಾಧ್ಯವಾಗುತ್ತದೆ. ಅದಕ್ಕೆ ತಕ್ಕಂತೆ ಸಂಪನ್ಮೂಲಗಳನ್ನು ಸರಕಾರ ಒದಗಿಸಿಕೊಡದಿದ್ದರೆ ಮುಖ್ಯ ರಸ್ತೆಗಳ ಸ್ಥಿತಿ ಅಯೋಮಯವಾಗುವ ಆತಂಕದ ಭಾವ ವ್ಯಕ್ತವಾಗಿದೆ.

ಶಿರಸಿ ನಗರ ವ್ಯಾಪ್ತಿಯಲ್ಲಿ :

ರಾಜ್ಯ ಹೆದ್ದಾರಿ ನಗರದಲ್ಲಿ ಇದ್ದಿದ್ದು

ಕುಮಟಾ-ತಡಸ್‌ 6.60ಕಿಮೀ

ಖಾನಾಪುರ-ತಾಳಗುಪ್ಪ 3.20ಕಿಮೀ

ಸೊಣಗಿಮನೆ-ಉಂಚಳ್ಳಿ ಪಾಲ್ಸ್‌ 2ಕಿಮೀ

ಶಿರಸಿ-ಹೊಸನಗರ 2ಕಿಮೀ

ಅನುದಾನದ ಕೊರತೆ :

ಲೋಕೋಪಯೋಗಿ ಇಲಾಖೆಯಿಂದ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಸರಕಾರ ಆದೇಶದ ಸಂದರ್ಭ ಆರ್ಥಿಕ ವರ್ಷದ ಮಧ್ಯಭಾಗದಲ್ಲಿ ಆಗಿರುವುದರಿಂದ ರಾಜ್ಯ ಹೆದ್ದಾರಿಗಳ ನಿರ್ವಹಣೆಗೆ ಅನುದಾನ ಕೊರತೆ ಕಾಡುವಂತಾಗಿದೆ. ತಮ್ಮ ಬಜೆಟ್‌ನಲ್ಲಿ ಹಣ ನಿಗದಿಪಡಿಸಿಕೊಳ್ಳಲು ಅವಕಾಶವಾಗಿಲ್ಲ. ಒಂದು ವೇಳೆ ನಗರ ಸ್ಥಳೀಯ ಸಂಸ್ಥೆಗಳು ಈ ಹಣವನ್ನು ತಮ್ಮ ಸಂಸ್ಥೆಗಳಿಂದ ಭರಿಸಲು ಮುಂದಾದರೆ ಅದೊಂದಿಷ್ಟು ಹೊರೆಯಾಗಲಿದೆ. ಇದರಿಂದ ನಗರ ಒಳ ರಸ್ತೆಗಳ ಸುಧಾರಣೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಾಂತ್ರಿಕತೆ ಕಠಿಣ :

RELATED ARTICLES  ಭೂಮಿ ಇರುವದೇ ತನಗಾಗಿ ಎನ್ನುವ ಮನಷ್ಯನ ಧೋರಣೆಯಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ: ಶಿವಾನಂದ ಕಳವೆ

ಶಹರದ ಒಳ ರಸ್ತೆಗಳನ್ನು ಸ್ಥಳೀಯ ಸಂಸ್ಥೆಗಳ ಎಂಜಿನಿಯರ್‌ಗಳು ನಿರ್ವಹಿಸುತ್ತಾರೆ. ಸಿಬ್ಬಂದಿ ಕೊರತೆ ನಡುವೆ ಇರುವವರಲ್ಲೇ ಹಾಗೂ ಹೀಗೂ ಮುಂದುವರಿಯುತ್ತದೆ. ಆದರೆ ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯಾಗುವುದರಿಂದ 15-20ಟನ್‌ ಸಾಮರ್ಥ್ಯ‌ದ ವಾಹನಗಳೂ ಓಡಾಡುವುದರಿಂದ ಅದಕ್ಕೆ ತಕ್ಕಂತೆ ಗುಣಮಟ್ಟ ಕಾದುಕೊಳ್ಳಬೇಕಾದ ಅಗತ್ಯವಿದೆ. ಆದರೆ ಅಧಿಕಾರಿಯೊಬ್ಬರು ಹೇಳುವಂತೆ ಸ್ಥಳೀಯ ಸಂಸ್ಥೆಗಳಲ್ಲಿ ಇಷ್ಟೊಂದು ಗುಣಮಟ್ಟದ ತಂತ್ರಜ್ಞಾನ ಹೊಂದಿರುವ ಎಂಜಿನಿಯರ್‌ಗಳ ಕೊರತೆ ಇದೆ. ಇವೆಲ್ಲವೂ ಸವಾಲಿನ ಕೆಲಸವಾಗಿದೆ. ಹಾಗೇ ಇಂಡಿಯನ್‌ ರೋಡ್‌ ಕಾಂಗ್ರೆಸ್‌ ನಿಗದಿಗೊಳಿಸಿರುವ ಮಾರ್ಗಸೂಚಿಗಳನ್ವಯ ರೈಟ್‌ ಆಫ್‌ ವೇ ನಿರ್ವಹಿಸಬೇಕಾಗುತ್ತದೆ. ಅದರಂತೆ ರಸ್ತೆಯ ಒಟ್ಟಾರೆ ಅಗಲವನ್ನು 40ಮೀಟರ್‌ ಕಾಯ್ದುಕೊಳ್ಳಬೇಕಾಗಿದೆ ಎನ್ನುತ್ತಾರೆ.

ಸ್ಪಷ್ಟತೆಯಿಲ್ಲದ ಆದೇಶ :

ಸರಕಾರ ಆದೇಶ ನೀಡಿದ್ದರೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಲಯದಲ್ಲಿ ಸ್ಪಷ್ಟತೆಯಿಲ್ಲ.ಈಗಾಗಲೇ ಶಿರಸಿಯಲ್ಲಿ ಐದು ರಸ್ತೆಯಿಂದ ಕೊಟೆಕೆರೆವರೆಗೆ ಕಳೆದ ಎರಡು ವರ್ಷಗಳ ಹಿಂದೆ ರಸ್ತೆ ಅಗಲೀಕರಣಗೊಳಿಸಲು ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಹೀಗೆ ತೆರವು ಮಾಡಿದ ರಸ್ತೆ ಡಾಂಬರಿಕಣರ ಮಾಡುವವರು ಯಾರು ? ಹಾಗೇ ಜಾಗ ಬಿಟ್ಟುಕೊಟ್ಟವರಿಗೆ ಪರಿಹಾರಕ್ಕೆ ಪ್ರಸ್ತಾವನೆ ಹೋಗಿದ್ದರೂ ಅದರ ಮುಂದಿನ ಪ್ರಕ್ರಿಯೆಗಳು ಹೇಗೆ ಎಂಬೆಲ್ಲ ಅಂಶಗಳು ಗೊಂದಲಕ್ಕಿಡು ಮಾಡುವಂತಿವೆ ಎಂದು ಮೂಲಗಳು ಹೇಳುತ್ತವೆ.