ಕುಮಟಾ : ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಮಟಾ, ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆ ಇವರುಗಳ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಅತ್ಯಂತ ಅಭೂತಪೂರ್ವವಾಗಿ ಪ್ರಾರಂಭಗೊಂಡಿತು.
ಕಡ್ಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಿವೇದಿತಾ ಕಡ್ಲೆ ಕಲಿಕಾ ಹಬ್ಬದ ದಿನದರ್ಶಿಕೆ ಬಿಡುಗಡೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಸಹಜ ಕಲಿಕೆಗೆ ಅವಕಾಶಗಳನ್ನು ಸೃಷ್ಟಿಸಿಕೊಡುವ ಕೆಲಸವಾದರೆ ಬದುಕು ಕಟ್ಟಿಕೊಟ್ಟಂತೆ ಆಗುತ್ತದೆ, ಕಲಿಕೆಯಲ್ಲಿ ದೊರೆಯವ ಸ್ವಾತಂತ್ರ್ಯ ಮಕ್ಕಳಲ್ಲಿ ಸಂಭ್ರಮ ಉಂಟುಮಾಡುತ್ತದೆ. ಕಲಿಕೆ ಸಂತಸದಿಂದ ಕೂಡಿದ್ದರೆ ಜ್ಞಾನಾರ್ಜನೆ ಸುಲಭ ಎಂದು ಹೇಳಿದಳು. ಸೃಜನಶೀಲತೆಯನ್ನು ಹತ್ತಿಕ್ಕುವ ಬದಲು ಅದನ್ನು ವಿದ್ಯಾರ್ಥಿಗಳ ಬೆಳವಣಿಗೆಗೆ ನೆರವಾಗುವಂತೆ ತಿದ್ದಬೇಕು. ಮುರಿದು ಕಟ್ಟುವ ಕಲೆಗಾರಿಕೆ, ಒಟನಾಟದ ಕಲಿಕೆಗೆ ಶಾಲೆಗಳಲ್ಲಿ ಅವಕಾಶವಿದ್ದರೆ ಸಹಜ ಕಲಿಕೆ ಪ್ರೋತ್ಸಾಹಿಸಿದಂತಾಗುತ್ತದೆ ಎನ್ನುತ್ತಾ `ಬಾಲವ್ಯವನ್ನು ನೆನಪಿಸಿಕೊಂಡು ಅಲ್ಲಿಯ ಘನಾವಳಿಗಳನ್ನು ಮೆಲುಕು ಹಾಕುವುದು ಒಂದು ಅತ್ಯಂತ ಅಪೂರ್ವ ಅನುಭವ ಎಂದು ಹೇಳಿದಳು.
ಯಕ್ಷಗಾನದ ವೇಷ ಭೂಷಣತೊಟ್ಟು, ಸ್ವಾಗತ ಹಾಗೂ ಪ್ರಾಸ್ಥಾವಿಕ ಮಾತುಗಳನ್ನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್. ಭಟ್ಟ ಶಾಲೆಯಲ್ಲಿ ಯಾವುದೇ ಪ್ರಶ್ನೆ ಕೇಳಿದಾಗ ಮಕ್ಕಳನ್ನು ಗದರದೇ ಅವರಿಗೆ ಉತ್ತರ ನೀಡಿದರೆ ಅಂಥ ಕಲಿಕೆ ಸಂತಸದ ಕಲಿಕೆಯಾಗುತ್ತದೆ. ಬಾಯಿಪಾಠದ ಬದಲು ಕಲಿಕೆಯನ್ನು ಅನುಭವವಾಗಿಸುವ ಕಲಿಕಾ ಹಬ್ಬ ಮಕ್ಕಳಿಗೆ ಹೆಚ್ಚು ಆಕರ್ಷಕವಾಗುತ್ತದೆೆ ಎಂದರು.
ಶಿಕ್ಷಣ ಇಲಾಖೆಯ ಅಧಿಕಾರಿ ಲತಾ ನಾಯಕ, ಡಿ.ಡಿ.ಪಿ.ಐ ಈಶ್ವರ ನಾಯ್ಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಎನ್.ಜಿ. ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತೇಶ ನಾಯಕ, ಸಿ.ಪಿ. ರಾಯ್ಕರ್, ಮುಖ್ಯ ಶಿಕ್ಷಕರಾದ ಮಮತಾ ನಾಯ್ಕ, ಭಾರತಿ ನಾಯ್ಕ, ತಾಲ್ಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಶಿವಾನಂದ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವ್ಕರ್, ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಕ್ಷೇತ್ರ ಸಮನ್ವಯಧಿಕಾರಿ ರೇಖಾ ನಾಯ್ಕ ಪಾಲ್ಗೊಂಡಿದ್ದರು. ಸಮೂಹ ಸಂಪನ್ಮೂಲ ಕೇಂದ್ರದ ಪ್ರದೀಪ ನಾಯಕ, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಿಕ್ಷಕರು ಹಾಜರಿದ್ದರು.
ವಿದ್ಯಾರ್ಥಿಗಳನ್ನು ವಿವಿಧ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸುವ ಅನೇಕ ಚಟುವಟಿಕೆಗಳನ್ನು ಸಂಯೋಜಿಸಿ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಕಲಿಕಾ ಹಬ್ಬದ ಸಮವಸ್ತ್ರ ತೊಟ್ಟು ವಿದ್ಯಾರ್ಥಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಅಧಿಕಾರಿಗಗಳು ಹಾಗೂ ಶಿಕ್ಷಕರ ಯಕ್ಷಗಾನ ಹಾಗೂ ಗೊಂಬೆ ವೇಷಗಳು ಗಮನ ಸೆಳೆದವು. ವಿದ್ಯಾರ್ಥಿಗಳು ಯಕ್ಷಗಾನ ಕುಣಿತದೊಂದಿಗೆ ಸ್ವಾಗತಿಸಿದರು.