ಮುಂಡಗೋಡ : ಸರ್ವಧರ್ಮ ಸಮನ್ವಯತೆಯ ಬೆಳಕು ಚೆಲ್ಲುವ ಹಣತೆ ಮುಂಡಗೋಡದಲ್ಲಿ ತನ್ನ ಕಾರ್ಯಚಟುವಟಿಕೆ ಆರಂಭಿಸಿರುವುದು ಅರ್ಥಪೂರ್ಣ. ಯಾಕೆಂದರೆ ಟಿಬೇಟಿಯನ್ ಮನಸ್ಸುಗಳೊಟ್ಟಿಗೆ ಎಲ್ಲ ಧರ್ಮೀಯ ಮನಸ್ಸುಗಳೂ ಸಾಮರಸ್ಯದಿಂದ ಉಸಿರಾಡುತ್ತಿರುವ ಮುಂಡಗೋಡದಲ್ಲಿ ಹಣತೆ ಹೊಣೆ ಸಾಕಷ್ಟು ಇದೆ. ಇಲ್ಲಿ ಮನೆಮನೆಗಳ ಜಗಲಿಯಲ್ಲಿ ಹಣತೆ ಬೆಳಗಬೇಕು ಎಂದು ಸಾಹಿತಿ ನಾಗಪತಿ ಹೆಗಡೆ ಹುಳಗೋಡ ಅಭಿಪ್ರಾಯಪಟ್ಟರು. ಪಟ್ಟಣದ ಇಡಗುಂಜಿ ಮಹಾಗಣಪತಿ ದೇವಸ್ಥಾನದದ ಡಾ. ನಾಗೇಶ ಪಾಲನಕರ ವೇದಿಕೆಯಲ್ಲಿ ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಮುಂಡಗೋಡ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಹಿಂದೆ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಮನೆ ಮನೆಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳು ವಿಫುಲವಾಗಿ ನಡೆಯುತ್ತಿದ್ದವು. ಅಂಥ ಕಾರ್ಯಕ್ರಮಗಳು ಈ ಹಣತೆ ಸಂಘಟನೆಯಿAದ ನಡೆಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ತಾಲೂಕಿನ ಪಾಳಾ ಗ್ರಾಮದ ಸರಕಾರಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಾಸುದೇವ ಎಸ್. ನಾಯಕ್ ಅವರು ಹಣತೆಯನ್ನು ಬೆಳಗುವ ಜವಾಬ್ದಾರಿ ಕೇವಲ ಒಂದು ಸಂಘಟನೆಗೆ ಸೀಮಿತವಾಗಿರದೇ ಅದು ಸಮುದಾಯದ ಜವಾಬ್ದಾರಿಯಾದಾಗ ಆ ಬೆಳಕು ಹೊಸ ತಲೆಮಾರಿನ ಹೆಜ್ಜೆಗಳಿಗೆ ಮಾರ್ಗ ತೋರುತ್ತದೆ. ಮುಂಡಗೋಡದ ಜಗಲಿಯಲ್ಲಿ ಯುವಕರೇ ಸೇರಿಕೊಂಡು ಹಣತೆ ಬೆಳಗಿರುವುದರಿಂದ ಇದರ ಮೇಲೆ ಭರವಸೆ ಹೆಚ್ಚಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಮುಂಡಗೋಡದ ನೆಲ ಸಾಹಿತ್ಯಕವಾಗಿ ಬರಡಾಗಿದೆ ಎಂಬ ಅಭಿಪ್ರಾಯ ಸಾಹಿತ್ಯಕವಲಯದಲ್ಲಿದೆ. ಇಂಥ ವ್ಯಂಗ್ಯ ಈ ನೆಲಕ್ಕೆ ತಟ್ಟದಂತೆ ಯುವ ಬರಹಗಾರರನ್ನು ಗುರುತಿಸಿ ಅವರಿಗಾಗಿ ಸಾಹಿತ್ಯ ಕಮ್ಮಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದ ಹಣತೆ ಯಲ್ಲಾಪುರ ಘಟಕದ ಅಧ್ಯಕ್ಷ ರಾಘವೇಂದ್ರ ಹೊನ್ನಾವರ, ಶಿರಸಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ, ದಾಂಡೇಲಿ ಅಧ್ಯಕ್ಷ ರಾಘವೇಂದ್ರ ಗಡೆಪ್ಪನವರ್ ಮಾತನಾಡಿದರು.
ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಮುಂಡಗೋಡ ತಾಲೂಕಾಧ್ಯಕ್ಷ ವಿನಯ ಪಾಲನಕರ ಅವರಿಗೆ ಬೆಳಗುವ ಹಣತೆ ನೀಡಿ ಸಂAಘಟನೆಯ ಅಧಿಕಾರ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂತೋಷ ರೇವಣಕರ, ಯೋಧ ವಿಕಾಸ ಕುರಿಯವರ ಪರವಾಗಿ ಅವರ ಪತ್ನಿ ದೀಪಾ ಕುರಿಯವರ, ಸಾಹಿತಿ ಎನ್.ಜಯಚಂದ್ರನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೆ ಮುನ್ನ ನೂತನವಾಗಿ ನಿರ್ಮಿಸಿದ ಮುಂಡಗೋಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ. ನಾಗೇಶ ಪಾಲನಕರ ವೇದಿಕೆಯನ್ನು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಉದ್ಘಾಟಿಸಿದರು.
ಹಣತೆ ಮುಂಡಗೋಡ ತಾಲೂಕು ಘಟಕದ ಅಧ್ಯಕ್ಷ ವಿನಯ ಪಾಲನಕರ ಸ್ವಾಗತಿಸಿದರು. ಜಿಲ್ಲಾ ಘಟಕದ ಪ್ರಧಾನ ಸಂಚಾಲಕ ಎನ್.ಜಯಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಹೆಗಡೆ ಪ್ರಾರ್ಥಿಸಿದರು. ಸಂತೋಷ ಕುಸನೂರು ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಬಡಿಗೇರ ವಂದಿಸಿದರು.