ಕುಮಟಾ : ಜನರ ಸಾವಿನ ಮೇಲೆ ರಾಜಕಾರಣ ಮಾಡುವ ಬಿಜೆಪಿ ತ್ರಿಪುರದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರ ಮೇಲೆ ಈ ಬಿಜೆಪಿ ಮುಖಂಡರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಮಹಿಳೆಯರ ಬಗ್ಗೆ ಇವರಲ್ಲಿ ಮಾತೃ ಭಾವನೆ ಇಲ್ಲ, ಅಲ್ಲದೇ ಬಿಜೆಪಿಗರದ್ದು ಹುಸಿ ದೇಶಭಕ್ತಿಯೇ ಹೊರತು ನಿಜವಾದ ಧರ್ಮದ ಮೇಲೆ ಅವರಿಗೆ ಪ್ರೀತಿ ಇಲ್ಲ. ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಹೇಳಿದರು. ಅವರು ಗುರುವಾರ ಕುಮಟಾದಲ್ಲಿ ಹಮ್ಮಿಕೊಂಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಕರಾವಳಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಫರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರಾಜ್ಯ ಕಂಡರಿಯದ ದುರಾಡಳಿತದಿಂದ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಪ್ರಧಾನಿ ಮೋದಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವಾಗ ಸ್ವಿಸ್ ಬ್ಯಾಂಕ್‌ನ ದೇಶದ ಸಂಪೂರ್ಣ ಕಪ್ಪು ಹಣವನ್ನು ವಾಪಸ್ ತಂದು ದೇಶದ ಪ್ರತಿ ನಾಗರಿಕರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ವಾಗ್ದಾನ ನೀಡಿದ್ದರು. ಆದರೆ ಅದು ಇನ್ನು ಸಾಧ್ಯವಾಗಿಲ್ಲ. ಜನರು ಜನಧನ ಖಾತೆ ತೆರೆಯುವಾಗ ಹಾಕಿದ ೭೫ ಸಾವಿರ ಕೋಟಿ ಹಣ ಅಧಾನಿಗೆ ನೀಡಿದರು. ಗುಜರಾತ್ ನರಮೇದದ ಬಗ್ಗೆ ಬಿಬಿಸಿ ಸಿದ್ಧಪಡಿಸಿದ ಸಾಕ್ಷö್ಯ ಚಿತ್ರ ಪ್ರದರ್ಶನಕ್ಕೆ ಬಿಜೆಪಿ ಪಕ್ಷ ಅಡ್ಡಪಡಿಸುವುದ್ಯಾಕೆ? ಜನಸಂಘ, ಹಿಂದೂ ಮಹಾಸಭಾಗಳು ಎಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಸೊಂಟ ಮುರಿಯುವ ಬೆಲೆ ಏರಿಕೆಯ ಬಗ್ಗೆ ಪ್ರಧಾನಮಂತ್ರಿ ಮೋದಿ ತುಟಿಬಿಚ್ಚಿ ಮಾತನಾಡುವುದಿಲ್ಲ. ಬಿಜೆಪಿ ಎಂದಿಗೂ ಜನರಿಗೆ ಉಪಯೋಗವಾಗುವಂತಹ ಅಭಿವೃದ್ಧಿ ಕೆಲಸ ಮಾಡಿಲ್ಲ. ಬದಲಾಗಿ ಕೋಮು ಗಲಭೆ, ಹೆಣದ ಮೇಲೆ ರಾಜಕಾರಣ ಮಾಡಿಯೇ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಅವರ ಮನಸ್ಥಿತಿ ಅಭಿವೃದ್ಧಿಕ್ಕಿಂತ ಭ್ರಷ್ಟಾಚಾರ ಹಾಗೂ ಲೂಟಿಯಲ್ಲೆ ನಿರತರಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.
ಮಾಜಿ ಸಚಿವ ಹಾಲಿ ಶಾಸಕ ಆರ್ ವಿ ದೇಶಪಾಂಡೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪರಿಸ್ಥಿತಿ ಸಂಪೂರ್ಣ ಕಾಂಗ್ರೆಸ್ ಪರವಾಗಿತ್ತು. ಬಿಜೆಪಿ, ಆರ್.ಎಸ್.ಎಸ್ ವಾತಾವರಣ ಕಲುಷಿತಗೊಳಿಸಿದವು. ಪರೇಶ್ ಮೇಸ್ತಾನ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿ, ಅಧಿಕಾರಕ್ಕೆ ಬಂದರು. ಆದರೆ ಇದು ಕೊಲೆಯಲ್ಲ ಎಂದು ಸಿಬಿಐ ವರದಿ ನೀಡಿದೆ. ಬಿಜೆಪಿಯ ಸುಳ್ಳನ್ನು ನೀವೆಲ್ಲ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಜಿಲ್ಲೆಯ ಆರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವಂತೆ ಮಾಡುವ ಜವಾಬ್ದಾರಿ ನಮ್ಮ ಕಾರ್ಯಕರ್ತರ ಮೇಲಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಮತ್ತು ಕಾಂಗ್ರೆಸ್ ಮುಖಂಡ ಮಂಜುನಾಥ ಭಂಡಾರಿ ಅವರು ಬಿಜೆಪಿಯ ದುರಾಡಳಿತದ ಬಗ್ಗೆ ವಾಗ್ದಾಳಿ ನಡೆಸಿ, ಕಾಂಗ್ರೆಸಿನ ಕಾರ್ಯಕ್ರಮ ಪ್ರಜಾಧ್ವನಿ ಯಾತ್ರೆಯ ಮಹತ್ವ ಬಗ್ಗೆ ತಿಳಿಸಿದರು. ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ, ಮಾಜಿ ಶಾಸಕರಾದ ಶಾರದಾ ಮೋಹನ ಶೆಟ್ಟಿ, ಮಂಕಾಳು ವೈದ್ಯ, ಸತೀಶ ಸೈಲ್, ಜೆಡಿ.ನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಎಲ್.ನಾಯ್ಕ, ಪ್ರಮುಖರಾದ ರತ್ನಾಕರ ನಾಯ್ಕ, ಮಂಜುನಾಥ.ಎಲ್.ನಾಯ್ಕ, ಶಿವಾನಂದ ಹೆಗಡೆ ಕಡತೋಕಾ, ಭಾಸ್ಕರ ಪಟಗಾರ, ಹೊನ್ನಪ್ಪ ನಾಯಕ, ಪ್ರದೀಪ ನಾಯಕ ದೇವರಬಾವಿ, ಯಶೋಧರ ನಾಯ್ಕ, ಭುವನ್ ಭಾಗ್ವತ್, ರಮಾನಂದ ನಾಯಕ, ಗಾಯತ್ರಿ ಗೌಡ, ರವಿ ಶೆಟ್ಟಿ ಕವಲಕ್ಕಿ ಇತರರು ಇದ್ದರು.