ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಬಹು ಕಾಲದ
ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಸಾಮಾಜಿಕ ಜಾಲ ತಾಣದಲ್ಲಿ ಆಂದೋಲನ ನಡೆಸಲಾಗಿತ್ತು. ಇದೇ ವೇಳೆ ಚಿತ್ರ ದುರ್ಗದಲ್ಲಿ ಹೊಸ ಮೆಡಿಕಲ್ ಕಾಲೇಜು
ಸ್ಥಾಪನೆಗೆ ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಹೊಸದಾಗಿ ಏಳು ವಿಶ್ವ ವಿದ್ಯಾನಿಲಯ ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
2023-24ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 3,09,182 ಲಕ್ಷ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಕೃಷಿ ಮತ್ತು ಪೂರಕ ಚಟುವಟಿಕೆಗಳು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ಬೆಂಗಳೂರು ಸಮಗ್ರ ಅಭಿವೃದ್ಧಿ, ಸಂಸ್ಕೃತಿ, ಸುಧಾರಣೆ ಮತ್ತು ಸಾರ್ವಜನಿಕ ಸೇವೆ, ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿ, ಮಕ್ಕಳ ಅಭ್ಯುದಯ ಎಂದು ವಿಂಗಡಣೆ ಮಾಡಿ ಪ್ರಸಕ್ತ ಸಾಲಿನ ಆಯವ್ಯಯವನ್ನು ಮಂಡನೆ ಮಾಡಲಾಗುತ್ತಿದೆ.
ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳ ಆಧಾರದಲ್ಲಿ ಈ ಬಾರಿಯ ಬಜೆಟ್ ಮಂಡನೆಯಾಗುತ್ತಿದೆ. ಬಜೆಟ್ ಗಾತ್ರ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಳವಾಗಿದೆ.