ದಾಂಡೇಲಿ: ಟಿಪ್ಪರೊಂದು ಹರಿದು ಪಾದಾಚಾರಿಯೋರ್ವ ಮೃತಪಟ್ಟ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ನಡೆದಿದೆ. ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರದ ವಿನಾಯಕ ನಗರ ನಿವಾಸಿಯಾಗಿರುವ 70 ವರ್ಷ ವಯಸ್ಸಿನ ರಾಮಪ್ಪ ಮಡಿವಾಳ ಎಂಬಾತನೆ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಬೆಳಿಗ್ಗೆ ಅಂಗಡಿಗೆಂದು ಮನೆಯಿಂದ ಹೊರಗಡೆ ಬಂದಿದ್ದನು. ಈ ಸಂದರ್ಭದಲ್ಲಿ ಹಳಿಯಾಳ ಕಡೆಯಿಂದ ಬರುತ್ತಿದ್ದ ಟಿಪ್ಪರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ.
ಈ ಸಂದರ್ಭದಲ್ಲಿ ನೆಲಕ್ಕುರುಳಿದ್ದ ರಾಮಪ್ಪ ಮಡಿವಾಳ ಅವರು ಟಿಪ್ಪರಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಘಟನಾ ಸ್ಥಳಕ್ಕೆ ಸಿಪಿಐ ಬಿ.ಎಸ್.ಲೋಕಾಪುರ, ಪಿಎಸೈ ಐ.ಆರ್.ಗಡ್ಡೇಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ದಾಂಡೇಲಿ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಹಳದನಕರ ಭೇಟಿ ನೀಡಿದ್ದರು.