ಕುಮಟಾ: ಸೆಂಟರ್ ಫಾರ್ ಹ್ಯೂಮನ್ ರಿಸೋರ್ಸ್ ಡೆವೆಲಪ್‌ಮೆಂಟ್ (ಸಿಹೆಚ್‌ಆರ್‌ಡಿ) ಬೆಂಗಳೂರು ಇವರು ನಡೆಸುವ ಆಲ್ ಇಂಡಿಯಾ ಜನರಲ್ ನಾಲೇಜ್ ಎಕ್ಸಾಮಿನೇಶನ್ (ಎಐಜಿಕೆಎ) ಪರೀಕ್ಷೆಯಲ್ಲಿ, ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ರ‍್ಯಾಂಕ್ ಪಡೆಯುವುದರ ಮೂಲಕ ಅಮೋಘ ಸಾಧನೆಗೈದಿದ್ದಾರೆ. ಎಂಟನೇ ವರ್ಗದ ಕುಮಾರ ರಾಹುಲ್ ಮುರಳಿ ಭಟ್ಟ ಹಾಗೂ ಹತ್ತನೇ ವರ್ಗದ ಕುಮಾರ ರಜತ ಶೇಷಗಿರಿ ನಾಯ್ಕ ಇವರು ರಾಷ್ಟ್ರ ಮಟ್ಟದಲ್ಲಿ ಕ್ರಮವಾಗಿ ಪ್ರಥಮ ಹಾಗೂ ಎಂಟನೇ ಸ್ಥಾನ ಪಡೆದು ಸಂಸ್ಥೆಯ ಕೀರ್ತಿಯನ್ನು ಇನ್ನಷ್ಟು ಬೆಳಗಿದ್ದಾರೆ.
ಸಿಹೆಚ್‌ಆರ್‌ಡಿ ಪರೀಕ್ಷೆಗಳು ತಮ್ಮ ಕಠಿಣ ಪರೀಕ್ಷಾ ಪ್ರಕ್ರಿಯೆಗೆ ಹೆಸರುವಾಸಿಯಾಗಿದ್ದು, ಇವು ಗಣಿತ, ವಿಜ್ಞಾನ, ಸಾಮಾಜಿಕ ಅಧ್ಯಯನಗಳು ಮತ್ತು ಭಾಷಾ ಕೌಶಲ್ಯಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ. ಪ್ರತಿ ವರ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.
ರಾಜ್ಯ ಮಟ್ಟದ ರ‍್ಯಾಂಕ್ ಗಳಿಕೆಯಲ್ಲಿ ಮುಂಚೂಣಿಯಲ್ಲಿರುವ ಕೊಂಕಣ ಶಾಲೆಯು, ಈ ಸಾಧನೆಯೊಂದಿಗೆ ರಾಷ್ಟ್ರಮಟ್ಟದಲ್ಲಿಯೂ ಸಾಧನೆಯ ದಾಪುಗಾಲನ್ನು ಇಟ್ಟಂತಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಅಭಿನಂದಿಸಿದೆ.