ಕಾರವಾರ: ಕುಮಟಾ ತಾಲೂಕಿನ ತದಡಿಯಲ್ಲಿ ನಡೆದಿದ್ದ ವೃದ್ದನೋರ್ವನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏಳು ವರ್ಷ ಶಿಕ್ಷೆ ಪ್ರಕಟ ಮಾಡಿ ಆದೇಶಿಸಿದೆ. ಕಳೆದ 2021ರ ಸೆಪ್ಟೆಂಬರ್ 24 ರಂದು ತದಡಿಯ ಅಭಿಜಟ್ಟಿ ರಸ್ತೆಯಲ್ಲಿರುವ ವಿವೇಕಾನಂದ ಪುತ್ತು ಶಾನಭಾಗ ಎನ್ನುವವರ ಮೇಲೆ ಒರಿಸ್ಸಾ ಮೂಲದ ಆಕಾಶ್ ಎನ್ನುವ ಆರೋಪಿ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದನು. ಕೊಲೆಯಾದ ವಿವೇಕಾನಂದ ಅವರ ಪತ್ನಿ ಬಟ್ಟೆಯನ್ನು ಒಗೆಯುವಾಗ ಬೆಳಿಗ್ಗಿನ ಜಾವ ಆರೋಪಿ ಆಕಾಶ್ ಮೈ ಮೇಲೆ ಯಾವುದೇ ಬಟ್ಟೆಯನ್ನ ಧರಿಸದೇ ನಿಂತುಕೊಂಡು ಕೆಟ್ಟ ದೃಷ್ಟಿಯಿಂದ ನೋಡುವಾಗ ಆಕೆ ಪ್ರಶ್ನೆ ಮಾಡಿದ್ದು ತಕ್ಷಣ ಆತ ಅಲ್ಲಿಂದ ತಪ್ಪಿಸಿಕೊಂಡು ಮನೆಯ ಮೇಲೆ ಹೋದಾಗ ಮನೆಯ ಮೇಲಿದ್ದ ವಿವೇಕಾನಂದ ಆತನನ್ನು ಪ್ರಶ್ನೆ ಮಾಡಲು ಮುಂದಾಗಿದ್ದರು.
ಮನೆಯ ಮೇಲಿದ್ದ ರಾಡ್ ನಿಂದ ವಿವೇಕಾನಂದ ಅವರಿಗೆ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದು, ಆಸ್ಪತ್ರೆ ಸಾಗಿಸುವ ವೇಳೆ ವಿವೇಕಾನಂದ ಮೃತಪಟ್ಟಿದ್ದರು. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಇನ್ಸಪೆಕ್ಟರ್ ಶ್ರೀಧರ್ ಹಾಗೂ ಸಬ್ ಇನ್ಸಪೆಕ್ಟರ್ ನವೀನ್ ನಾಯ್ಕ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಕುರಿತು ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆರೋಪಿಗೆ ಏಳು ವರ್ಷ ಕಠಿಣ ಸಜೆ ಹಾಗೂ ಏಳು ಸಾವಿರ ರೂಪಾಯಿ ದಂಡವನ್ನ ಕಟ್ಟುವಂತೆ ಆದೇಶಿಸಿದ್ದಾರೆ. ಪ್ರಕರಣ ಕುರಿತು ಸರ್ಕಾರಿ ಅಭಿಯೋಜಕಿಯಾಗಿ ತನುಜಾ ಹೊಸಪಟ್ಟಣ ಹಾಗೂ ಪ್ರಭಾರ ಸರ್ಕಾರಿ ಅಭಿಯೋಜಕರಾಗಿ ರಾಜೇಶ್ ಮಳಗೀಕರ್ ವಾದ ಮಂಡಿಸಿದ್ದರು