ಕುಮಟಾ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ 8ರಂದು ಕೋನಳ್ಳಿಯ ವನದುರ್ಗಾ ಸಭಾಭವನದಲ್ಲಿ ನಡೆಯಲಿದ್ದು, ಶಾಸಕ ದಿನಕರ ಶೆಟ್ಟಿಯವರು ಇಂದು ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕನ್ನಡವನ್ನು ಉಳಿಸಿ ಬೆಳೆಸಲು ಎಲ್ಲರೂ ಒಂದಾಗಬೇಕಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ಜನರು ಆಯಾ ರಾಜ್ಯದ ಭಾಷೆಗಳನ್ನೇ ಹೆಚ್ಚು ಬಳಸಿ ಭಾಷಾಭಿಮಾನ ಮೆರೆಸುತ್ತಿದ್ದಾರೆ. ಅದೇ ರೀತಿ ಕನ್ನಡಿಗರು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು. ನಾಡು ನುಡಿಗಾಗಿ ಕೆಲಸ ಮಾಡುವ ಅಗತ್ಯತೆ ಈಗಿನ ದಿನಗಳಲ್ಲಿ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಭಾಷೆಗಾಗಿ ನೆಲೆ ಜಲಕ್ಕಾಗಿ ಕಾರ್ಯ ಮಾಡುತ್ತಿದೆ ಎಂದು ಇವರು ವಿವರಿಸಿದ್ದರು.

ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ ಕಾರ್ಯಕ್ರಮದ ಉಪದೇಶಗಳನ್ನು ವಿವರಿಸುತ್ತಾ, ಡಾ. ಎಂ.ಎಚ್ ನಾಯ್ಕರವರನ್ನು ಸಮ್ಮೇಳನ ಅಧ್ಯಕ್ಷರಾಗಿ ಗುರುತಿಸಲಾಗಿದೆ. ಸಂಗೀತ ಹಾಗೂ ಸಾಹಿತ್ಯದ ಮೂಲಕ ಜನ ಮಾನಸದಲ್ಲಿ ಅಚ್ಚುಳಿದಿರುವ ಪಂ. ಷಡಕ್ಷರಿ ಗವಾಯಿ ಅವರ ಹೆಸರಿನಲ್ಲಿ ಪ್ರಧಾನ ವೇದಿಕೆಯನ್ನು ನಿರ್ಮಿಸಲಾಗಿದ್ದು, ದಿ. ಡಾ. ಎಮ್.ಡಿ ನಾಯ್ಕ, ದಿ. ಪ್ರೋ. ಎಸ್.ಆರ್. ನಾರಾಯಣರಾವ್, ದಿ. ಜಿ.ಎಸ್. ಕಾಮತ್ ನೆನಪಿನಲ್ಲಿ ದ್ವಾರಗಳನ್ನು ರಚಿಸಲಾಗುವುದು. ಮಾರ್ಚ್ ಎಂಟರ ಬೆಳಗ್ಗೆ 8:30 ಕ್ಕೆ ಧ್ವಜಾರೋಹಣ ಕಾರ್ಯಕ್ರಮ, ನಂತರದಲ್ಲಿ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, 10:00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಡಾ. ಜಿ.ಎಲ್ ಹೆಗಡೆಯವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಬಿ ಎನ್ ವಾಸರೆ ಆಶಯ ನುಡಿ ಆಡಲಿದ್ದಾರೆ. ಸಿ. ಡಿ ಪಡುವಣಿ ಅವರ ‘ಬಿಂಬ’ ಕವನ ಸಂಕಲನ ಬಿಡುಗಡೆಯನ್ನು ಶಾಸಕರು ಮಾಡಲಿದ್ದಾರೆ. ಪ್ರಧಾನವಾಗಿ ಮೂರು ಗೋಷ್ಠಿಗಳು ನಡೆಯಲಿದ್ದು, ವಿಚಾರಗೋಷ್ಠಿ, ಕವಿ ಕಾವ್ಯ ಸಮಯ, ಸಮ್ಮೇಳನ ಅಧ್ಯಕ್ಷರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ 4:30ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಈ ಸಂದರ್ಭದಲ್ಲಿ ಸಾಧಕರುಗಳನ್ನು ಸನ್ಮಾನಿಸಲಾಗುವುದು. ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಗಮನ ಸೆಳೆಯಲಿದೆ ಎಂದು ಮಾಹಿತಿ ನೀಡಿದರು.

RELATED ARTICLES  ನವೀಕೃತ ಕಂಪ್ಯೂಟರ್ ಲ್ಯಾಬ್ ಹಾಗೂ ೨೦೨೩-೨೪ನೇ ಸಾಲಿನ ಎಟಿಎಲ್ ಲ್ಯಾಬ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ : ಸಾಧನೆಯ ಹಿಂದಿರುವ ಶಿಕ್ಷಕರು ತೆರೆಮರೆಯಲ್ಲಿ ಇರುತ್ತಾರೆ : ಸುನೀಲ್ ಪೈ

ಈ ಸಂದರ್ಭದಲ್ಲಿ ಕ. ಸಾ.ಪ. ಕುಮಟಾ ಘಟಕದ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಕಾರ್ಯದರ್ಶಿಗಳಾದ ಪ್ರಮೋದ ನಾಯ್ಕ ಹಾಗೂ ಗಿರೀಶ ನಾಯ್ಕ, ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ರೋಹಿದಾಸ ನಾಯ್ಕ, ಹಿರಿಯ ಸಾಹಿತಿ ಬೀರಣ್ಣ ನಾಯಕ ಹಾಗೂ ತಾಲ್ಲೂಕು ಕ. ಸಾ. ಪ. ಪದಾಧಿಕಾರಿಗಳು ಇದ್ದರು.

RELATED ARTICLES  ಕೆನರಾ ಡಿಸ್ಟ್ರಿಕ್ಟ್ ಟೀಚರ್ಸ್ ಸೊಸೈಟಿ, ಅಂಕೋಲಾ ಅಧ್ಯಕ್ಷರಾಗಿ ನಾರಾಯಣ ಎಚ್ ನಾಯಕ ಹಿರೇಗುತ್ತಿ