ಶಿರಸಿ: ಶಿಕ್ಷಣದ ಎಲ್ಲಾ ವಿಭಾಗದಲ್ಲಿಯೂ ಇತಿಹಾಸದ ವಿಷಯದ ಕಲಿಕೆ ಇರುವಂತೆ ಆಗಬೇಕು. ಆಗ ಮಾತ್ರ ಇತಿಹಾಸಕ್ಕೆ ಹೆಚ್ಚಿನ ಮಹತ್ವ ಬರುತ್ತದೆ ಎಂಸು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ಅವರು ತಾಲೂಕಿನ ಜೈನ ಮಠದಲ್ಲಿ ಚಾಲನೆಗೊಂಡ ಎರಡು ದಿನಗಳ ಕಾಲ‌ನಡೆಯಲಿರುವ ಚತುರ್ಥ ವರ್ಷದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಹಾಗೂ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಇತಿಹಾಸದ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತಂದು ವಿಜ್ಞಾನ, ತಾಂತ್ರಿಕ, ವಾಣಿಜ್ಯ ಹೀಗೆ ಎಲ್ಲಾ ವಿಭಾಗದಲ್ಲಿಯೂ ಇತಿಹಾಸ ಓದುವಂತೆ ಆಗಬೇಕು ಎಂದು ಆಶಿಸಿದರು. ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿ ಮಾತನಾಡಿ ” ಚತುರ್ಥ ವರ್ಷದ ಇತಿಹಾಸ ಸಮ್ಮೇಳನದ ಎಲ್ಲಾ ಗೋಷ್ಠಿಗಳು, ಕಾರ್ಯಕ್ರಮಗಳ ವರದಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಮುಂದಿನ ಸಮ್ಮೇಳನದಲ್ಲಿ‌ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಈ ಮೊದಲು ಸಮ್ಮೇಳನಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿ ಮಾತನಾಡಿದ ಸೋದೆ ರಾಜಮನೆತನ ಮಧುಲಿಂಗ ಒಡೆಯರು ” ಇತಿಹಾಸ ಉಳಿಸಿಕೊಂಡು ಹೋಗಬೇಕು. ಸ್ಥಳೀಯ ಇತಿಹಾಸಗಳನ್ನು ನಾವು ಸಂರಕ್ಷಿಸಬೇಕು. ಇಂದಿನ ಯುವ ಪೀಳಿಗೆಯಲ್ಲಿ ಇತಿಹಾಸದ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿ ಸಮ್ಮೇಳನಕ್ಕೆ ಶುಭಕೋರಿದರು‌.

RELATED ARTICLES  ಜ್ವರವೆಂದು ಆಸ್ಪತ್ರೆಗೆ ತೆರಳಿದ ನವ ವಿವಾಹಿತೆ ಸಾವು : ಕುಟುಂಬದವರ ಆಕೃಂದನ.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಇತಿಹಾಸ ತಜ್ಞ ಡಾ.ಎಚ್.ಎಸ್.ಗೋಪಾಲರಾವ್ ಮಾತನಾಡಿ ” ಭೂತ ಕಾಲವಿಲ್ಲದೆ ನಾವು ಭವಿಷ್ಯವನ್ನು ಕಟ್ಟಲು ಸಾಧ್ಯವಿಲ್ಲ. ಇತಿಹಾಸವನ್ನು ಉಳಿಸಿಕೊಳ್ಳುವ ಕೆಲಸ ಕೇವಲ ವಿಶ್ವವಿದ್ಯಾಲಯದ ಹಾಗೂ ಇಲಾಖೆಗಳ ಕೆಲಸ ಮಾತ್ರವಲ್ಲ. ನಾವು ಅದನ್ನು ಉಳಿಸಿಕೊಳ್ಳುವತ್ತ ಸಾಗಬೇಕು. ಇಲ್ಲಿನ ಸೋದೆ ಸದಾಶಿವರಾಯರ ಕೆಲಸ ಹಾಗೂ ವೈಫಲ್ಯ, ಸಾಧನೆಗಳನ್ನು ತಿಳಿಸುವ ಕೆಲಸ ಆಗಬೇಕು. ಇತಿಹಾಸವನ್ನು ಅರಿಯಬೇಕು. ಇಂತ ಸಮ್ಮೇಳನಗಳು ಇತಿಹಾಸ ಕಟ್ಟಲು ಸಹಕಾರಿಯಾಗುತ್ತದೆ ಎಂದು ಸಮ್ಮೇಳನದ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಶ್ರೀಮತಿ ಹನುಮಾಕ್ಷಿ ಗೋಗಿ ಇವರಿಂದ ರಚಿತಾದ ” ಜನ ಸಮಯ ” ಎಂಬ ಕೃತಿಯನ್ನು ಬಿಡುಗಡೆ ಮಾಡಿ, ಕೃತಿ ಪರಿಚಯ ಮಾಡಲಾಯಿತು. ಸಮ್ಮೇಳನದಲ್ಲಿ ಕೆಂಗೇರಿ ಚಕ್ರಪಾಣಿ ಅವರು ಸೆರೆ ಹಿಡಿದ ಸಾವಿರಕ್ಕೂ ಅಧಿಕ ಇತಿಹಾಸ ಪ್ರಾಚೀನ ಸ್ಮಾರಕಗಳು ಹಾಗೂ ನಾಣ್ಯ ಮತ್ತು ಪುಸ್ತಕ ಪ್ರದರ್ಶನಗಳು ಎರಡು ದಿನಗಳ ಕಾಲ ನಡೆಯಲಿದೆ. ಕ.ವಿ.ವಿ. ಧಾರವಾಡದ ನಿವೃತ್ತ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಪ್ರಾಧ್ಯಾಪಕ ಡಾ.ಆರ್.ಎಮ್.ಷಡಕ್ಷರಯ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

RELATED ARTICLES  ಹೊನ್ನಾವರದಲ್ಲಿ ಶಂಕರ್ ನಾಗ್ ಪ್ರತಿಮೆ ನಿರ್ಮಾಣಕ್ಕೆ ಪ್ರಯತ್ನ..!

ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಶಶಿಭೂಷಣ ಹೆಗಡೆ, ಡಾ.ಗಣಪತಿ ಭಟ್, ಸೋಮಶೇಖರ ಬನವಾಸಿ, ಡಾ.ಜಿನದತ್ತ ಹಡಗಲಿ, ಮಂಜುನಾಥ ಭಂಡಾರಿ, ಚಂದ್ರದತ್ತ ಜೈನ್, ವಿ.ಎಮ್.ಹೆಗಡೆ ಬೊಮ್ಮನಳ್ಳಿ ಮುಂತಾದವರು ಉಪಸ್ಥಿತರಿದ್ದರು. ಸಮಿತಿ ಸಂಚಾಲಕ ಲಕ್ಷ್ಮೀಶ ಹೆಗಡೆ ಸೋಂದಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿರೂಪಾಕ್ಷ ಕಂಚಿಕೈ ನಿರೂಪಿಸಿದರು.