ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಆಲೆಮನೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಹೊನ್ನಾವರ ವಲಯದ ಉಪ ಸಂರಕ್ಷಣಾಧಿಕಾರಿಗಳಾದ ರವಿಶಂಕರ್ ಸಿ. ಅವರು ಹಾಗೂ ಇನ್ನುಳಿದ ಗಣ್ಯರು ಕಬ್ಬಿನಗಾಣಕ್ಕೆ ಕಬ್ಬನ್ನು ನೀಡುವುದರ ಮೂಲಕ ಹಾಗೂ ದೀಪ ಪ್ರಜ್ವಲನೆ ಮೂಲಕ ಅಲೆಮನೆ ಹಬ್ಬವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿಶಂಕರ್ ಸಿ. ಅರಣ್ಯ ಸಂರಕ್ಷಣೆಯ ಸಂದರ್ಭದಲ್ಲಿ ಗೋವುಗಳ ಸಂರಕ್ಷಣೆಗೂ ಅವಕಾಶ ಒದಗಿಬಂದಿತ್ತು. ಗಡಿ ಭಾಗದಲ್ಲಿ ಕಾರ್ಯ ನಿರ್ವಹಿಸುವಾಗ ಹತ್ಯೆಗಾಗಿ ಪಾಪಿಗಳು ಕೆಲವರು ಗೋವುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ, ಅವುಗಳನ್ನು ತಡೆದು ಸ್ವತಃ ಗೋವುಗಳನ್ನು ಸಾಕಿದ ಅನುಭವ ಜೀವನದುದ್ದಕ್ಕೂ ನೆನಪಿರುವಂತದ್ದು ಎಂದು ಅಭಿಪ್ರಾಯಪಟ್ಟರು. ಗೋವಿನ ಉಳಿವಿನ ಹೊಸ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಸಂಯೋಜನೆಗೊಂಡಿದ್ದು ನಾಲ್ಕು ದಿನಗಳ ಕಾಲ ಈ ಆಲೆಮನೆ ಹಬ್ಬ ನಡೆಯಲಿದೆ ಈ ಕಾರ್ಯಕ್ಕೆ ನಾವೆಲ್ಲರೂ ಸಹಕರಿಸಬೇಕೆಂದು ವಿನಂತಿಸಿದ್ದರು.
ಎಸ್.ಬಿ.ಐ ನ ವ್ಯವಸ್ಥಾಪಕರಾದ ದರ್ಶನ ಹೆಗಡೆ ಮಾತನಾಡಿ, ಗೋವುಗಳನ್ನು ಉಳಿಸುವಲ್ಲಿ ಹಾಗೂ ಭಾರತೀಯ ಗೋತಳಿಗಳ ಅನೇಕ ಅನೇಕ ಸಂತತಿಗಳ ಸಂರಕ್ಷಣೆಯಲ್ಲಿ ಇಂತಹ ಕಾರ್ಯಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಪಶ್ಚಿಮ ಘಟ್ಟಗಳ ರಕ್ಷಣಾ ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಸಭೆಯಲ್ಲಿ ಹಾಜರಿದ್ದು ಮಾತನಾಡಿ, 2008ರಲ್ಲಿ ಗೋಶಾಲೆಯ ಆವರದಲ್ಲಿ ನಡೆದ ಘಟನೆಯನ್ನು ಸ್ಮರಿಸಿಕೊಳ್ಳುತ್ತಾ, ಹತ್ಯೆಗೆ ಒಯ್ಯಲಾಗುತ್ತಿದ್ದ ಗೋವುಗಳನ್ನು ತಡೆದು ಎದುರಿಸಿದ ಸಮಸ್ಯೆಗಳ ಕುರಿತಾಗಿ ವಿವರಿಸಿ, ತನಗೆ ವಿಧಾನಸಭೆಯಲ್ಲಿ ಗೋವುಗಳ ಕುರಿತಾಗಿ ಧ್ವನಿ ಎತ್ತಲು ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಗೋಸೇವೆಯನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ನಡೆಸುವುದಾಗಿ ಅಭಿಪ್ರಾಯಪಟ್ಟರು. ಕುಮಟಾ ಎಸಿ ಎಫ್ ಅನಿಲ್, ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಆರ್ ಎಸ್ ಹೆಗಡೆ ಹರಗಿ, ಆರ್.ಜಿ ಭಟ್ಟ ಕುಮಟಾ ವೇದಿಕೆಯಲ್ಲಿದ್ದರು. ಗೋಶಾಲೆಯ ಅಧ್ಯಕ್ಷ ಮುರುಳಿಧರ ಪ್ರಭು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷರಾದ ಸುಬ್ರಾಯ ಭಟ್ಟ ವಂದಿಸಿದರು. ಅರುಣ ಹೆಗಡೆ ಸಹಕರಿಸಿದರು, ಗಣೇಶ ಜೋಶಿ ನಿರೂಪಿಸಿದರು.
ಗೋಶಾಲೆಯಲ್ಲಿ ಜನಿಸಿದ ಪುಟ್ಟ ಕರುವಿಗೆ ನಾಮಕರಣವನ್ನು ವೇದಿಕೆಯಲ್ಲಿಯೇ ಮಾಡಲಾಯಿತು. ವಿಧೂಷಿ ರೇಷ್ಮಾ ಭಟ್ಟ, ಮೂರೂರು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ನಾನಾ ರೀತಿಯ ವ್ಯಾಪಾರ ಮಳಿಗೆಗಳು, ವಿವಿಧ ಆಹಾರೋತ್ಪನ್ನ, ಗವ್ಯೋತ್ಪನ್ನ, ಗೋಮಯ ಪೇಂಟ್, ಕೃಷಿಗೆ ಮೌಲ್ಯ ವರ್ಧಿತ ಸ್ವರ್ಗಸಾರ ಗೊಬ್ಬರ, ಕರ ಕುಶಲ ಖಾದಿ ಬಟ್ಟೆ, ಬೆಲ್ಲದ ಬಾಳೆದಿಂಡು, ಪಪ್ಪಾಯಿ ದಿಂಡು, ಕಬ್ಬಿನ ಹಾಲಿನ ದೋಸೆ, ಗಿಲ್ ಮಿಟ್ ಮಿರ್ಚಿ, ಹಲಸಿನ ಕಾಯಿ ಬಿರಿಯಾನಿ ಮುಂತಾದ ವಿಶೇಷ ವ್ಯಾಪಾರ ಮಳಿಗೆ ಬಂದ ಗೋಪ್ರೇಮಿಗಳನ್ನು ಆಕರ್ಷಿಸಿತು.