ಹೊನ್ನಾವರ : ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು(ರಿ) ಇದರ ಆಶ್ರಯದಲ್ಲಿ ಉಪನ್ಯಾಸ ಹಾಗೂ ಈ ಸಾಲಿನ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ತಾಲೂಕಿನ ಹವ್ಯಕಸಭಾಭವನದಲ್ಲಿ ಸಂಪನ್ನವಾಯಿತು. ಕಾರ್ಯಕ್ರಮವನ್ನು ಶ್ರೀ ಕರಿಕಾನ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ಟ ನೆರವೇರಿಸಿ ಮಾತನಾಡಿ, ಸಮಾಜಕ್ಕೆ ಉತ್ತಮ ಸಂಸ್ಕಾರ ಹಾಗೂ ಸಂಪ್ರದಾಯವನ್ನು ಕಲಿಸಿಕೊಡುವ ನಿಟ್ಟಿನಲ್ಲಿ ಹವ್ಯಕ ಸಮಾಜ ಸದಾಕಾಲ ತೊಡಗಿಕೊಂಡಿದೆ. ಹವ್ಯ ಹಾಗೂ ಕವ್ಯ ಈ ಎರಡು ಕಾರ್ಯಗಳಲ್ಲಿ ತೊಡಗಿಕೊಂಡ ಹವ್ಯಕರು ಸಮಾಜದಲ್ಲಿ ಸಂಘಟಿತರಾಗಿ ಇಂತಹ ಸಂಘಟನೆಯನ್ನು ಮುನ್ನಡೆಸುತ್ತಿರುವುದು ಸಂತಸದ ವಿಚಾರ. ತಾಲೂಕಿನ ನೂರಾರು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವಿದ್ಯಾ ಪ್ರೋತ್ಸಾಹ ಧನ ನೀಡುತ್ತಿರುವುದು ಅತ್ಯುನ್ನತ ಮಟ್ಟದ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗದ ಹಂದಲಸುವಿನ ವಿದ್ವಾನ್ ಎಲ್ ವಾಸುದೇವ ಭಟ್ ಗಾಯತ್ರಿ ಉಪಾಸನೆ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಗಾಯತ್ರಿ ಮಂತ್ರದ ಮೂಲ. ಗಾಯತ್ರಿ ಉಪಾಸನೆಯನ್ನು ಯಾವ ರೀತಿ ಮಾಡಬೇಕು? ಗಾಯತ್ರಿ ಉಪಾಸನೆಯನ್ನು ಮಾಡುವುದರಿಂದ ದೊರೆಯುವ ಸಿದ್ದಿಗಳೇನು? ಎಂಬುದರ ಕುರಿತಾಗಿ ಮನೋಜ್ಞವಾಗಿ ಮಾತನಾಡಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.
ಶ್ರೀ ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷರಾದ ಶ್ರೀಧರ್ ಜೆ ಭಟ್ ಕೆಕ್ಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಕಾರ್ಯಗಳ ಕುರಿತಾಗಿ ಬೆಳಕು ಚೆಲ್ಲಿದರು. ಹವ್ಯಕ ಸಂಸ್ಕೃತಿ ಸಂಪ್ರದಾಯವನ್ನು ಉಳಿಸುವ ಜೊತೆಗೆ ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡುತ್ತಾ ಸಂಸ್ಥೆಯು ಪ್ರತಿವರ್ಷ ವಿನೂತನವಾಗಿ ಕಾರ್ಯಕ್ರಮವನ್ನು ನೆರವೇರಿಸುತ್ತಾ ಬಂದಿರುವ ಸಮಾಧಾನ ನಮಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೊನ್ನಾವರ ಕುಮಟಾ ತಾಲೂಕುಗಳು ಒಟ್ಟೂ123 ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳು ಹಾಗೂ ಪಾಲಕರು ಸಭೆಯಲ್ಲಿ ವಿದ್ಯಾ ಪ್ರೋತ್ಸಾಹ ಧನದ ಚೆಕ್ ನ್ನು ಪಡೆದುಕೊಂಡರು.
ಅಖಿಲ ಹವ್ಯಕ ಮಹಾಸಭಾದ ನಿರ್ದೇಶಕರುಗಳಾದ ಆರ್. ಜಿ ಹೆಗಡೆ ಮುಡಾರೆ ಸ್ವಾಗತಿಸಿದರು, ಅರುಣ ಹೆಗಡೆ ಕುಮಟಾ ಉಪನ್ಯಾಸಕರ ಪರಿಚಯ ಮಾಡಿದರು. ಮೋಹನ ಹೆಗಡೆ ಹೆರವಟ್ಟಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ವಿ.ಎಂ ಹೆಗಡೆ ಕಾರವಾರ ಸ್ಮರಣಿಕೆ ನೀಡಿದರು. ಕೃಷ್ಣಮೂರ್ತಿ ಭಟ್ಟ ಹೊನ್ನಾವರ ವಂದಿಸಿದರು. ಗಣೇಶ ಜೋಶಿ ಸಂಕೊಳ್ಳಿ ನಿರೂಪಿಸಿದರು.