ಗೋಕರ್ಣ : ಎಲ್ಲ ಜೀವಿಗಳೂ‌ ಬಯಸುವುದು ಸುಖವನ್ನು. ಆದರೆ ಸುಖವನ್ನು ಬಯಸುವುದು ಮಾತ್ರ ನಮ್ಮ ಕೈಯಲ್ಲಿದೆ. ಬಯಸಿದುದನ್ನು ಪಡೆಯುವುದು ನಮ್ಮ ಕೈಮೀರಿದೆ. ರಾಮಾಯಣವು ಇರುವ ಸುಖವನ್ನಲ್ಲದೆ, ಇಲ್ಲದ, ಕೈಮೀರಿದ ಸುಖವನ್ನೂ ಕೊಡಿಸುತ್ತದೆ ಎಂದು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಅವರು ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಶ್ರೀಗಳೇ ಧರ್ಮಭಾರತೀ ಪತ್ರಿಕೆಯಲ್ಲಿ ಬರೆದಿರುವ ಭಾವರಾಮಾಯಣವನ್ನು ರಾಮಾರ್ಪಣಗೊಳಿಸಿ ಮಾತನಾಡುತ್ತಾ, ರಾಮಾಯಣವನ್ನು ಓದುವಾಗಲೇ ಶಬ್ದಗಳಲ್ಲಿ ಹೇಳಲಾರದ ಸುಖದ ಅನುಭವವಾಗುತ್ತದೆ. ರಾಮಾಯಣವು ತೋರಿದ ಹಾದಿಯಲ್ಲಿ ನಡೆದಾಗ ಜೀವನದಲ್ಲಿ ಅನ್ಯಾನ್ಯ ಸುಖಗಳು ಒದಗಿ ಬರುತ್ತವೆ. ರಾಮಾಯಣದ ಅವಲೋಕನವು ಪುಣ್ಯವನ್ನು ತಂದುಕೊಡುತ್ತದೆ. ಹೀಗೆ ರಾಮಾಯಣದ ಅನುಸಂಧಾನದಿಂದ ಮುಬ್ಬಗೆಯ ಸುಖಗಳ ಪ್ರಾಪ್ತಿಯಾಗುತ್ತದೆ ಎಂದರು.

ರಾಮಾಯಣದ ಓದಿನಿಂದ ಜೀವಿಯು ಬಯಸುವ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳು ಲಭಿಸುತ್ತವೆ. ನಾಲ್ಕು ಪುರುಷಾರ್ಥಗಳನ್ನು ಹೊರತುಪಡಿಸಿ ಜೀವಿ ಏನನ್ನೂ ಬಯಸುವುದಿಲ್ಲ. ಏನನ್ನೇ ಬಯಸಿದರೂ ಅದು ಪುರುಷಾರ್ಥಗಳಲ್ಲೇ ಬರುತ್ತದೆ. ಹಾಗಾಗಿ ಪುರುಷಾರ್ಥವನ್ನು ಕೊಡುವುದರ ಮೂಲಕ ರಾಮಾಯಣ ಎಲ್ಲವನ್ನೂ ಕೊಟ್ಟಂತಾಯಿತು ಎಂದು ನುಡಿದರು.

ಇಂದು ಜಗತ್ತು ಹಣದ ಹಿಂದೆ ಓಡುತ್ತಿದೆ. ರಾಮಾಯಣವನ್ನು ಪಠಿಸಿದರೆ ಸಂಪತ್ತೆ ನಮ್ಮೆಡೆಗೆ ಹರಿದು ಬರುತ್ತದೆ. ರಾಮಾಯಣ ನಮ್ಮನ್ನು ಮತ್ತು ರಾಮಾವತಾರಿ ವಿಷ್ಣುವನ್ನು ಹತ್ತಿರವಾಗಿಸುತ್ತದೆ. ವಿಷ್ಣುವಿನ ಜೊತೆ ಲಕ್ಷ್ಮಿಯೂ ಇರುತ್ತಾಳೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಬಾಡ ಗ್ರಾಮದಲ್ಲಿ ಎಮ್.ಎಸ್.ಐ.ಎಲ್. ಮದ್ಯದಂಗಡಿ ಸ್ಥಾಪನೆ ವಿಚಾರ : ಮಾತಿನ ಚಕಮಕಿ

ಧರ್ಮಭಾರತೀ ಸಂಪಾದಕ ಕೃಷ್ಣಾನಂದ ಶರ್ಮಾ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಶ್ರೀಗಳು
ಸಂನ್ಯಾಸ ಸ್ವೀಕರಿಸಿ ಮೂವತ್ತು ವರ್ಷ ಸಂದಲಿದೆ. ಈ‌ ಹೊತ್ತಿನಲ್ಲಿ ಶ್ರೀಮಠದ ಅಂಗಸಂಸ್ಥೆ ಶ್ರೀಭಾರತೀಪ್ರಕಾಶನ ಪ್ರಕಟಿಸುವ ಧರ್ಮಭಾರತೀ ಪತ್ರಿಕೆಯಲ್ಲಿ ಪ್ರತಿತಿಂಗಳು ಶ್ರೀಗಳೇ ಪೂರ್ಣ ರಾಮಾಯಣವನ್ನು ಬರೆಯಲಿದ್ದಾರೆ. ಅದನ್ನು ಮೂವತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಿಸಲಾಗುತ್ತಿದೆ. ಈ ರಾಮಾಯಣ ಲೇಖನ ಪೂರ್ಣಗೊಂಡಾಗ ಪೂರ್ಣರಾಮಾಯಣ ಅಷ್ಟು ಮನೆಗಳಲ್ಲಿ ಶಾಶ್ವತವಾಗಿ ಇರಲಿದೆ ಎಂದು ಹೇಳಿದರು.

ರಾಮಚಂದ್ರಾಪುರಮಠ ಮಾಡಿದ ಅನೇಕ ಶಾಶ್ವತ ಕಾರ್ಯಗಳಲ್ಲಿ ಇದೂ ಒಂದಾಗಲಿದೆ. ಧರ್ಮಭಾರತಿಯ ಜೊತೆ ಶ್ರೀಸಂಸ್ಥಾ ಎನ್ನುವ ಶ್ರೀಮಠದ ವಾರ್ತಾ ಪತ್ರಿಕೆಯನ್ನು ಕೂಡ ಪ್ರತಿ ತಿಂಗಳು ಪ್ರಕಟಿಸಲಾಗುತ್ತದೆ. ಇದು ಪ್ರತಿದಿನ ನಡೆಯುತ್ತಿರುವ ಶ್ರೀಮಠದ ಲೋಕಕಲ್ಯಾಣಕಾರ್ಯಗಳ ಸಮಗ್ರ ಮಾಹಿತಿಯನ್ನು ಎಲ್ಲರಿಗೂ ಲಭ್ಯವಾಗಿಸಲಿದೆ ಎಂದರು.

ರಾಘವೇಶ್ವರಭಾರತೀಶ್ರೀಗಳು ಧರ್ಮಭಾರತೀಪತ್ರಿಕೆಯನ್ನು ರಾಮಾರ್ಪಣಗೊಳಿಸಿದರು. ನಂತರ ಪತ್ರಿಕೆಯನ್ನು ವಿಷ್ಣುಗುಪ್ತವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಮತ್ತು ಶಿಷ್ಯಭಕ್ತರಿಗೆ ಅನುಗ್ರಹಿಸಿ, ರಾಮಾಯಣವನ್ನು ಆಧರಿಸಿ ಪಾಠವನ್ನು ಮಾಡಿದರು.

RELATED ARTICLES  ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಎಚ್ಚರಿಕೆ

ವಿಶ್ವವಿದ್ಯಾಪೀಠದ ಲೋಕಸಂಪರ್ಕಾಧಿಕಾರಿ ಅಶ್ವಿನೀ ಉಡುಚೆ ಭಾವರಾಮಾಯಣದ ಮಹತ್ತ್ವವನ್ನು ವಿವರಿಸಿದರು. ಮಹಾಮಂಡಲದ ಅಧ್ಯಕ್ಷ ಆರ್, ಎಸ್ ಹೆಗಡೆ ಹರಗಿ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಶ್ರೀಭಾರತೀಪ್ರಕಾಶನದ ಅಧ್ಯಕ್ಷ ಸಚಿನ್, ಉಪಸಂಪಾದಕ ಗಣೇಶ ಕೃಷ್ಣ ಹೆಗಡೆ, ಪ್ರಸರಣ ಮಾರ್ಗದರ್ಶಕ ಮಹೇಶ ಚಟ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಭಾವರಾಮಾಯಣ

  • ಶ್ರೀಗಳು ಸಂನ್ಯಾಸ ಸ್ವೀಕರಿಸಿ 30 ವರ್ಷಗಳಾಗುತ್ತಿರುವ ಕಾಲಘಟ್ಟ
  • ಈ ವರ್ಷವನ್ನು ಶ್ರೀಮಠದ ಅಂಗಸಂಸ್ಥೆ ಶ್ರೀಭಾರತೀಪ್ರಕಾಶನದಿಂದ ವಿಶೇಷವಾಗಿ ಆಚರಣೆ
  • ಶ್ರೀಗಳೇ ಬರೆಯುತ್ತಿರುವ ಭಾವ ರಾಮಯಣವನ್ನು ಧರ್ಮಭಾರತೀಪತ್ರಿಕೆಯಲ್ಲಿ‌ ಪ್ರತಿತಿಂಗಳು ಪ್ರಕಟ
  • ಪತ್ರಿಕೆಯನ್ನು 30 ಸಾವಿರ ಮನೆಗಳಿಗೆ ತಲುಪಿಸುವ ಶಾಶ್ವತಕಾರ್ಯದ ಯೋಜನೆ.
  • ಶ್ರೀಸಂಸ್ಥಾ ಪತ್ರಿಕೆಯ ಮೂಲಕ ಶ್ರೀಮಠದ ಕೈಂಕರ್ಯವನ್ನು ಶ್ರೀಮಠದ ಭಕ್ತರಿಗೆ ತಲುಪಿಸುವ ಕಾರ್ಯ.

ರಾಮಾಯಣವನ್ನು ಓದುವಾಗಲೇ ಶಬ್ದಗಳಲ್ಲಿ ಹೇಳಲಾರದ ಸುಖದ ಅನುಭವವಾಗುತ್ತದೆ. ರಾಮಾಯಣವು ತೋರಿದ ಹಾದಿಯಲ್ಲಿ ನಡೆದಾಗ ಜೀವನದಲ್ಲಿ ಅನ್ಯಾನ್ಯ ಸುಖಗಳು ಒದಗಿ ಬರುತ್ತವೆ. ರಾಮಾಯಣದ ಅವಲೋಕನವು ತಂದು ಕೊಡುವ ಪುಣ್ಯವು ತಂದು ಕೊಡುವ ಸುಖವೇ ಬೇರೆ. ಹೀಗೆ ರಾಮಾಯಣದ ಅನುಸಂಧಾನದಿಂದ ಮುಬ್ಬಗೆಯ ಸುಖಗಳ ಪ್ರಾಪ್ತಿಯಾಗುತ್ತದೆ.

  • ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು,
    ಶ್ರೀರಾಮಚಂದ್ರಾಪುರಮಠ