ಸಿದ್ದಾಪುರ : ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ಹಾಗೂ ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ಬಾಕಿ ಇದೆ. ಅದನ್ನ ಮಾಡೇ ಮಾಡುತ್ತೇನೆ. ಈ ಬಗ್ಗೆ ಸಂಶಯ ಬೇಡ. ಮುಂದಿನ ಬಾರಿ ನಾನೇ ಗೆದ್ದು ಬರೋದು, ಈಗ ಆಗದ ಅಭಿವೃದ್ಧಿ ಕೆಲಸಗಳನ್ನ ನಾನೇ ಮಾಡೋದು ಎಂದು ಮುಖ್ಯಮಂತ್ರಿಗಳ ಎದುರೇ ಗದ್ದಿತರಾಗಿ ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ನಮ್ಮ ಕ್ಷೇತ್ರಕ್ಕೆ ಐದು ಸಾವಿರ ಹೆಚ್ಚುವರಿ ಮನೆಗಳನ್ನ ಮಂಜೂರಿಸಲಾಗಿದೆ. ಅದಕ್ಕಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮನೆ ನಂಬರ್ ಇದ್ದ ವಸತಿರಹಿತರಿಗೆ ಮನೆ ಕಟ್ಟಿಕೊಳ್ಳುವಂತೆ ಸಿಎಂ ಹಾಗೂ ವಸತಿ ಸಚಿವರೊಂದಿಗೆ ಮಾತನಾಡಿ ಅನುಕೂಲ ಮಾಡಿಕೊಟ್ಟಿದ್ದೇನೆ. ಆ ಸಂದರ್ಭದಲ್ಲೂ ಕಾನೂನಿನ ತೊಡಕುಗಳನ್ನು ತೆಗೆದು ತೊಂದರೆ ನೀಡಿದರು. ಈಗ ಎರಡು ಸಾವಿರ ಮನೆಗಳನ್ನ ಸಿದ್ದಾಪುರಕ್ಕೆ ಕೊಡಲು ಮುಂದಾದರೆ ಅದಕ್ಕೂ ಅಡ್ಡಿಪಡಿಸುತ್ತಿದ್ದಾರೆ. ನಾನು ಮನೆ ಕೊಡಲು ಬದ್ಧನಾಗಿದ್ದೇನೆ, ಕೊಟ್ಟೇ ಕೊಡುತ್ತೇನೆ ಎಂದರು. ನಾನು ಜನಪರ, ಅಭಿವೃದ್ಧಿಪರವಾಗಿದ್ದವನು. ಅಭಿವೃದ್ಧಿ ನಿಂತ ನೀರಲ್ಲ, ಅದು ನಿರಂತರವಾಗಿ ನಡೆಯುವಂಥದ್ದು. ಅದು ಯಾವತ್ತೂ ಮುಗಿಯಲ್ಲ. ಸಿದ್ದಾಪುರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದರು.